ಸಾಲು-ಸಾಲು ರಜೆ ಜನರಿಗೆ, ಚಿನ್ನಾಭರಣ ಕಳ್ಳರಿಗೆ!

ಹೈಗ್ರೌಂಡ್ಸ್, ಸಂಪಿಗೆಹಳ್ಳಿ, ವಿಜಯನಗರ, ಹೆಣ್ಣೂರು, ಕೊಡಿಗೇಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಹಾಗೂ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳನ್ನು ದೋಚಲಾಗಿದೆ. ರಜೆ ಮುಗಿಸಿ ಸೋಮವಾರ ಮನೆಗೆ ಬಂದವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಟೆಕ್ಕಿ ಮನೆಗೆ ಕನ್ನ : ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಂಜಪ್ಪ ಗಾರ್ಡನ್‌ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಕಲಾಂ ಅವರ ಮನೆಯ ಬೀಗ ಮುರಿದಿರುವ ಕಳ್ಳರು, 50 ಸಾವಿರ ರೂ. ನಗದು ಸೇರಿದಂತೆ 1 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.
ಉದ್ಯಮಿ ಮನೆಗೆ ಕನ್ನ : ಕುಟುಂಬದೊಂದಿಗೆ ಗೋವಾ ಪ್ರವಾಸಕ್ಕೆ ಹೋಗಿದ್ದ ಶಾಮ್ ಲಾಲ್ ಎಂಬ ಉದ್ಯಮಿಯ ಮನೆಗೆ ನುಗ್ಗಿದ ಕಳ್ಳರು, 18 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿನ್ನ ಕಳವು : ಚೆನ್ನೈಗೆ ತೆರಳಿದ್ದ ಖಾಸಗಿ ಕಂಪನಿ ಉದ್ಯೋಗಿ ವೇಲು ಅವರ ಮನೆ ಬೀಗ ಮುರಿದಿರುವ ಕಳ್ಳರು, 150 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿವೃತ್ತರ ಮನೆ ಲೂಟಿ : ಬಿಎಸ್ಎನ್ಎಲ್ ನಿವೃತ್ತ ನೌಕರ ವೆಂಕಟೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇವರು ಕುಟುಂಬ ಸಮೇತ ಚೆನ್ನೈಗೆ ಪ್ರವಾಸ ಹೋಗಿದ್ದರು. ಕಳುವಾಗಿರುವ ವಸ್ತುಗಳ ಮೌಲ್ಯ ಪತ್ತೆಯಾಗಿಲ್ಲ.
10 ಸಾವಿರ ಕಳವು : ಖಾಸಗಿ ಕಂಪನಿ ಉದ್ಯೋಗಿ ಶೀಲಾ ಎಂಬುವರ ನಿವಾಸದಲ್ಲಿ ಕಳ್ಳರು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 10 ಸಾವಿರ ಹಣ ದೋಚಿರುವ ಘಟನೆ ಬಾಪೂಜಿ ನಗರದಲ್ಲಿ ನಡೆದಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವನಗರದಲ್ಲಿ ಸಂಪತ್ ಎಂಬುವವರ ಮನೆಗೆ ನುಗ್ಗಿ 15 ಸಾವಿರ ರೂ. ಕಳುವು ಮಾಡಲಾಗಿದೆ.
ಸಂಪಿಗೆಹಳ್ಳಿ : ಮಗಳ ಮದುವೆ ಆಮಂತ್ರಣ ಹಂಚಲು ತೆರಳಿದ್ದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿ. (ಎಂಎಸ್‌ಐಎಲ್)ನ ಪ್ರಧಾನ ವ್ಯವಸ್ಥಾಪಕ ಸುಬ್ರಹ್ಮಣ್ಯ ಅವರ ಮನೆಯಲ್ಲಿ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಮೈಸೂರು ಹಾಗೂ ಮಂಡ್ಯದಲ್ಲಿ ಆಮಂತ್ರಣ ಪತ್ರಿಕೆ ಹಂಚಲು ಕುಟುಂಬದೊಂದಿಗೆ ಅವರು ಶುಕ್ರವಾರ ತೆರಳಿದ್ದರು ಸೋಮವಾರ ಬೆಳಗ್ಗೆ ಬಂದು ನೋಡಿದಾಗ, 40 ಗ್ರಾಂ ಚಿನ್ನಾಭರಣ, ಮೂರು ಕೆ.ಜಿ. ಬೆಳ್ಳಿ, ಮೂರು ಮೊಬೈಲ್ ಹಾಗೂ 15 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾಲ್ಕಾರು ದಿನ ಮನೆ ಬಿಟ್ಟು ತೆರಳುತ್ತಿದ್ದರೆ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಎಂಬ ಪೊಲೀಸರ ಮನವಿಯೂ ವಿಫಲವಾಗಿದೆ.
(67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ)












Click it and Unblock the Notifications