ಕೆಜೆಪಿ ಜೊತೆ ಮೈತ್ರಿ ಮಾಡಿಕೊಂಡ ಜಗದೀಶ್ ಶೆಟ್ಟರ್

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಗುರುವಾರ ಮೈಸೂರಿನಲ್ಲಿ ಮೈತ್ರಿ ಮಾತುಕತೆ ಮಾಡಿ ಮುಗಿಸಿದ್ದಾರೆ. ಮೈತ್ರಿಯೂ ಯಶಸ್ವಿಯಾಗಿದ್ದು, ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆ ಕೆಜೆಪಿಗೆ ದೊರಕಿದೆ.
ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಗಳು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಒಂದು ನಮಗೆ, ಎರಡು ನಿಮಗೆ ಎಂಬ ಯುಡಿಯೂರಪ್ಪ ಅವರ ಮೈತ್ರಿ ಸೂತ್ರಕ್ಕೆ ಬಿಜೆಪಿ ನಾಯಕರ ಸಮ್ಮತಿ ಸಿಕ್ಕಿದೆ.
ಶೆಟ್ಟರ್ ಸಮರ್ಥನೆ : ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಿನಲ್ಲಿಯೇ ದುರಾಡಳಿತ ಪ್ರಾರಂಭಿಸಿದೆ. ಜನರ ಕಾಳಜಿಯನ್ನು ಮರೆತಿದೆ.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಾಯಕವಾಗಬಾರದು ಎಂದು ಕೆಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಒಂದು ಕ್ಷೇತ್ರದಲ್ಲಿ ನಾವು ಅವರಿಗೆ ಬೆಂಬಲ ನೀಡಲಿದ್ದೇವೆ. ಎರಡು ಕ್ಷೇತ್ರದಲ್ಲಿ ನಮಗೆ ಅವರು ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.
ಬಿಜೆಪಿ ನಾಮಪತ್ರ ವಾಪಸ್ : ಕೆಜೆಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಶಸ್ವಿನಿ ಶೇಖರ್ ತಮ್ಮ ನಾಮಪತ್ರವನ್ನು ಗುರುವಾರ ಹಿಂಪಡೆದಿದ್ದಾರೆ. ಗುರುವಾರ ನಾಮಪತ್ರವನ್ನು ಹಿಂಪಡೆಯಲು ಕೊನೆಯ ದಿನವಾಗಿತ್ತು.
ಇದರಿಂದಾಗಿ ಮೈಸೂರು ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿ ಯು.ಎಸ್.ಶೇಖರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನ್ ಕಣದಲ್ಲಿ ಉಳಿದಿದ್ದಾರೆ. ಕೆಜೆಪಿ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲೆ ಒತ್ತಡ ಹೆಚ್ಚಾಗಿದೆ. ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವೂ ಆಗಿರುವುದರಿಂದ ಕಾಂಗ್ರೆಸ್ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಕೆಜೆಪಿ ನಾಮಪತ್ರ ವಾಪಸ್ : ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವರಾಜ್ ಸಜ್ಜನ್ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ನಾಮಪತ್ರವನ್ನು ವಾಪಸ್ ಪಡೆದಿರುವುದಾಗಿ ಅವರು ಹೇಳಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಸ್ಪರ್ಧಿಸಿದ್ದಾರೆ.












Click it and Unblock the Notifications