ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಚಾರ: ರಮ್ಯಾ ಪರ ತಾಯಿ ರಂಜಿತಾ- ವಿರುದ್ಧ ರಕ್ಷಿತಾ

By Srinath
|
Google Oneindia Kannada News

ಮಂಡ್ಯ, ಆಗಸ್ಟ್ 8: ಒಂದಷ್ಟು ನೀರಸವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಇದೀಗ ಕಳೆಕಟ್ಟುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರು ಸಾಕು ತಂದೆಯ ಹಠಾತ್ ಸಾವಿನ ಬಳಿಕ ಸಹಜತೆಗೆ ಹೊರಳುತ್ತಿದ್ದಾರೆ.

ಚುನಾವಣಾ ಪ್ರಚಾರವನ್ನು ಸ್ವತಃ ಪಕ್ಷವೇ ವಹಿಸಿಕೊಂಡಿದ್ದು ಇಡೀ ಕಾಂಗ್ರೆಸ್ ಪಟಾಲಂ ಸಾಂತ್ವನ ಹೇಳುವ ನೆಪದಲ್ಲಿ ಮೇಡಂ ರಮ್ಯಾರನ್ನು ಭೇಟಿ ಮಾಡಿ, ಕಣದಲ್ಲಿ ಮುಂದುವರಿಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

ಕಣದಲ್ಲಿ ಉಳಿದಿರುವ ಹುರಿಯಾಳುಗಳ ಚಿತ್ರಣ ಸ್ಪಷ್ಟವಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆಯೇ ನೇರ ಹಣಾಹಣಿ ಏರ್ಪಟ್ಟಂತಿದೆ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆಯೇ ಈ ಪೈಪೋಟಿ ಎಂದು ಬಣ್ಣಿಸಲಾಗಿದೆ.

ಪ್ರಭಾವಿ ಕಾಂಗ್ರೆಸ್ ನಾಯಕಿ ರಂಜಿತಾ ಪ್ರಚಾರ

ಪ್ರಭಾವಿ ಕಾಂಗ್ರೆಸ್ ನಾಯಕಿ ರಂಜಿತಾ ಪ್ರಚಾರ

ಶ್ರೀರಂಗಪಟ್ಟಣದ ಸಬ್ಬನಕುಪ್ಪೆ ಗ್ರಾಮದಲ್ಲಿರುವ ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಭೇಟಿ ನೀಡುವ ಮೂಲಕ ರಂಜಿತಾ ಬೋರಯ್ಯ ಅವರು ಪುತ್ರಿ, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕಿಯಾಗಿರುವ ರಂಜಿತಾ ಅವರು ಬುಧವಾರ ಮತಬೇಟೆಗೆ ಇಳಿದಿದ್ದು, ಸ್ನೇಹಿತರು/ ಸಂಬಂಧಿಕರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ್ದಾರೆ. ಬಿಜೆಪಿಯ ಸ್ಥಳೀಯ ಮುಖಂಡರನ್ನು ಕಾಂಗ್ರೆಸ್ಸಿಗೆ ಸೇರ್ಪಡೆ ಮಾಡಿಕೊಳ್ಳಲು ಗಾಳ ಬೀಸಿದ್ದಾರೆ.
'ಸಾಕು ತಂದೆ ನಾರಾಯಣ್ ಅವರ ನಿಧನದಿಂದ ರಮ್ಯಾ ಆಘಾತಕ್ಕೆ ಒಳಗಾಗಿದ್ದಾರೆ. ನಾಲ್ಕು ದಿನ ನೋವು ಕಳೆದ ನಂತರ ರಮ್ಯಾ ಪ್ರಚಾರಕ್ಕೆ ಬರ್ತಾಳೆ' ಎಂದು ರಂಜಿತಾ ಅವರು ತಮ್ಮ ಪುತ್ರಿ ರಮ್ಯಾ ಬಗ್ಗೆ ಕಾರ್ಯಕರ್ತರಿಗೆ ಮನದಟ್ಟುಪಡಿಸಿದ್ದಾರೆ.

ಕೈಜೋಡಿಸಿದ ಕೃಷ್ಣ -ಅಂಬರೀಶ್

ಕೈಜೋಡಿಸಿದ ಕೃಷ್ಣ -ಅಂಬರೀಶ್

ಅಭ್ಯರ್ಥಿಯ ತಂದೆ ಸಾವಿನಿಂದ ಅಚಾನಕ್ಕಾಗಿ ಎದುರಾದ ವಿಚಿತ್ರ ಸನ್ನಿವೇಶದಿಂದ ಕಂಗೆಟ್ಟಿರುವ ಕಾಂಗ್ರೆಸ್ ಮಂದಿ, ಪಕ್ಷದ ಅಭ್ಯರ್ಥಿ ನಟಿ ರಮ್ಯಾ ಅವರನ್ನು ಗೆಲ್ಲಿಸಲು ಶ್ಯಾನೆ ತಲೆಕೆಡಿಸಿಕೊಳ್ಳುತ್ತಿದೆ. ಮಹಾಮಹಿಮ ನಾಯಕರೇ ರಮ್ಯಾ ಮುಂದೆ ಠಳಾಯಿಸುತ್ತಿದ್ದಾರೆ.
ಪರಸ್ಪರ ವಿರುದ್ಧ ದಿಕ್ಕು ಹಿಡಿದಿರುವ ಮಾಜಿ ವಿದೇಶಾಂಗ ಸಚಿವ ಕೃಷ್ಣ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ಅಂಬರೀಶ್ ಅವರುಗಳು ಬುಧವಾರ ಅರ್ಧ ಗಂಟೆಗೂ ಹೆಚ್ಚು ಕಾಲ ಕೃಷ್ಣ ಮನೆಯಲ್ಲಿ ಮಾತುಕತೆ ನಡೆಸಿ, ಹಳೆಯದ್ದನ್ನು ಮರೆತು ರಮ್ಯಾ ಗೆಲುವಿಗೆ ಕೈಜೋಡಿಸಿದ್ದಾರೆ. ರಮ್ಯಾರನ್ನು ಗೆಲ್ಲಿಸುವುದು ಪಕ್ಷಕ್ಕೆ ಪ್ರತಿಷ್ಠೆಯ ವಿಷಯವಾಗಿದೆ. ಹಾಗಾಗಿ ಒಟ್ಟಿಗಿರೋಣ ಎಂದು ಕೃಷ್ಣಗೆ ಅಂಬಿ ತಿಳಿಯಹೇಳಿದ್ದಾರೆ.

ಇದೀಗ ಬಂದ ಸುದ್ದಿಯಂತೆ ದಿಗ್ವಿಜಯ್ ಸಿಂಗ್ ಅವರು ಕೃಷ್ಣ ನಿವಾಸಕ್ಕೆ ಭೇಟಿ ನೀಡಿ, ಉಪಚುನಾವಣೆ ಪ್ರಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಡಿಗ್ಗಿ ಅಭಯ

ಡಿಗ್ಗಿ ಅಭಯ

ಖಿನ್ನತೆ ಅನುಭವಿಸುತ್ತಾ ಪ್ರಚಾರದಿಂದ ದೂರ ಉಳಿದಿರುವ ನಟಿ ರಮ್ಯಾ ಅವರನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್‌ ಸಿಂಗ್‌ ಅವರು ಬುಧವಾರ ಸಂಜೆ ಭೇಟಿ ಮಾಡಿ ಸಾಂತ್ವನ ಹೇಳಿದ್ದಲ್ಲದೆ, ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ರಮ್ಯಾ ಮೇಡಂ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷ ನಿಮ್ಮ ಜತೆಗಿದ್ದು, ಮಂಡ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ರಮ್ಯಾಗೆ ಡಿಗ್ಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಪರಮೇಶ್ವರ್, ಕೆಜೆ ಜಾರ್ಜ್, ಎಚ್ಕೆ ಪಾಟೀಲ್ ಅವರೊಟ್ಟಿಗೆ ರಮ್ಯಾ ಉಳಿದುಕೊಂಡಿರುವ ಪಂಚಾತಾರಾ ಹೊಟೇಲಿಗೆ ತೆರಳಿದ ದಿಗ್ವಿಜಯ್‌ ಸಿಂಗ್‌ ಅವರು ರಮ್ಯಾ ಜತೆ ಸುಮಾರು ಹೊತ್ತು ಮಾತುಕತೆ ನಡೆಸಿದ್ದಾರೆ. 'ತಮ್ಮ ಗೆಲುವಿನ ಪೂರ್ಣ ಜವಾಬ್ದಾರಿಯನ್ನು ಪಕ್ಷ ತೆಗೆದುಕೊಳ್ಳುತ್ತದೆ. ತಾವು ಪ್ರಚಾರ ಅಂಗಳದಲ್ಲಿ ಕಾಣಿಸಿಕೊಂಡರಷ್ಟೇ ಸಾಕು. ರಾಹುಲ್ ಗಾಂಧಿ ಆಸಕ್ತಿ ವಹಿಸಿ ತಮ್ಮನ್ನು ಕಣಕ್ಕಿಳಿಸಿರುವುದರಿಂದ ಭವಿಷ್ಯ ಉಜ್ವಲವಾಗಿದೆ' ಎಂದು ರಮ್ಯಾಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ಡಿಗ್ಗಿ ಪಾದಕ್ಕೆ ಎರಗಿದ ರಮ್ಯಾ

ಡಿಗ್ಗಿ ಪಾದಕ್ಕೆ ಎರಗಿದ ರಮ್ಯಾ

ಸಿಂಗ್ ಮಾತಿಗೆ ಒಪ್ಪಿಗೆ ಸೂಚಿಸಿದ ರಮ್ಯಾ ಮೇಡಂ, ವೈಯಕ್ತಿಕ ಕಾರಣದಿಂದ ಕಣದಿಂದ ಹಿಂದೆ ಸರಿಯುವ ಚಿಂತನೆ ನಡೆಸಿದ್ದು ನಿಜ. ಆದರೆ ಪಕ್ಷದ ಹಿರಿಯರ ಪ್ರೀತಿಗೆ ಕಟ್ಟುಬಿದ್ದು ಅವರ ಸಲಹೆಗೆ ತಲೆಯಾಡಿಸಿದ್ದಾರೆ ಎನ್ನಲಾಗಿದೆ.

ಅಂತಿಮವಾಗಿ ಪ್ರಚಾರಕ್ಕೆ ಆಗಮಿಸಲು ರಮ್ಯಾ ಅವರು ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ. ಭೇಟಿಯ ಕೊನೆಗೆ ಕಾಂಗ್ರೆಸ್ ದಂಡು ಸಮಾಧಾನದಿಂದ ಹೊರಡಲನುವಾದಾಗ ರಮ್ಯಾ ಅವರು ದಿಗ್ವಿಜಯ್‌ ಸಿಂಗ್‌ ಅವರ ಕಾಲಿಗೆ ಎರಗಿ ನಗುತ್ತಲೇ ಬೀಳ್ಕೊಟ್ಟರು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ರಮ್ಯಾಗೆ ಮಂಡ್ಯದ ಗೌಡತಿ ಚಾಲೆಂಜ್

ರಮ್ಯಾಗೆ ಮಂಡ್ಯದ ಗೌಡತಿ ಚಾಲೆಂಜ್

ಈ ಮಧ್ಯೆ, ರಾಜಕೀಯ ಮಹತ್ವಾಕಾಂಕ್ಷಿಯ ನಟಿ ರಕ್ಷಿತಾ ಅವರು ಪಕ್ಷ ಬಯಸಿದಲ್ಲಿ ಜೆಡಿಎಸ್‌ ಪರ ಪ್ರಚಾರ ನಡೆಸಲು ಉತ್ಸುಕರಾಗಿದ್ದಾರೆ. ರಕ್ಷಿತಾ ಪ್ರೇಮ್ ಅವರಿಗೆ ಮಂಡ್ಯ ಕ್ಷೇತ್ರ ಅತ್ತೆಯ ಮನೆ. ಹಾಗಾಗಿ ರಕ್ಷಿತಾ ಪ್ರಚಾರಕ್ಕೆ ಅನುಕೂಲಕರವಾಗಿದೆ ಎನ್ನಲಾಗಿದೆ.

ಸಣ್ಣ ವಯಸ್ಸಿನಲ್ಲಿಯೇ ರಮ್ಯಾಗೆ ದೊಡ್ಡ ಅವಕಾಶ ಸಿಕ್ಕಿರುವ ಬಗ್ಗೆಯೂ ಮೆಚ್ಚುಗೆ ಸೂಚಿಸಿರುವ ರಕ್ಷಿತಾ ಅವರು ತಮ್ಮ ಪಕ್ಷ ಸೂಚಿಸಿದರೆ ರಮ್ಯಾ ವಿರುದ್ಧ ಅಂತಲ್ಲದಿದ್ದರೂ ಜೆಡಿಎಸ್‌ ಅಭ್ಯರ್ಥಿ (ಸಿಎಸ್ ಪುಟ್ಟರಾಜು) ಪರವಾಗಿ ಪ್ರಚಾರ ನಡೆಸುವೆ ಎಂದು ಹೇಳಿದ್ದಾರೆ.

ಇದೇ ವೇಳೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರು ಸಮ್ಮತಿಸಿ/ಅವಕಾಶ ನೀಡಿದರೆ ಖಂಡಿತ ಸ್ಪರ್ಧಿಸುವುದಾಗಿ ಜೆಡಿಎಸ್‌ ನಾಯಕಿ ರಕ್ಷಿತಾ ಹೇಳಿಕೊಂಡಿದ್ದಾರೆ.

English summary
Mandya Lok Sabha bypoll Congress candidate actress Ramya sticks to guns and owes to fight it out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X