ಪತ್ನಿಯ ಕಾಟ: 2 ಮಕ್ಕಳ ಕೆಎಎಸ್ ಅಧಿಕಾರಿ ಆತ್ಮಹತ್ಯೆ

ಶಿಡ್ಲಘಟ್ಟ ಉಪ ಖಜಾನೆ ಅಧಿಕಾರಿ ರವಿಕುಮಾರ್ (32) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಪತ್ನಿಯ ಸತತ ಕಿರುಕುಳವೇ ರವಿ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಕೋಲಾರ ನಗರ ಪೊಲೀಸರು ರವಿ ಪತ್ನಿ ಸುಕನ್ಯಾರನ್ನು ಬಂಧಿಸಿದ್ದಾರೆ.
ಡೆತ್ ನೋಟ್ ಬರೆದಿಟ್ಟಿರುವ ರವಿಕುಮಾರ್ ಅವರು ಪತ್ನಿಯ ಸತತ ಕಿರುಕುಳದ ಬಗ್ಗೆ ಅಪಾರ ದುಃಖ ತೋಡಿಕೊಂಡಿದ್ದಾರೆ. ರವಿಕುಮಾರ್, ಮೂಲತಃ ಚಿಂತಾಮಣಿ ತಾಲೂಕಿನ ಸಿಕಲ್ಲು ಗ್ರಾಮದವರು. ಇವರು ಕೋಲಾರದ ಕಾರಂಜಿಕಟ್ಟೆಯಲ್ಲಿ ಪತ್ನಿ ಸುಕನ್ಯಾ, ಮಗ ಧನುಷ್, ಮಗಳು ಸಿಂಚನಾಳೊಂದಿಗೆ ನೆಲೆಸಿದ್ದರು.
ಪತ್ನಿ ಸುಕನ್ಯಾ ಜತೆ ಚಿಂತಾಮಣಿಗೆ ತೆರಳಿದ್ದ ರವಿಕುಮಾರ್ ಮಂಗಳವಾರ ಕೋಲಾರಕ್ಕೆ ಹಿಂದುರಿಗಿದ್ದರು. ಸುಕನ್ಯಾ ಮಾತ್ರ ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು.
ಮನೆಗೆ ಬಂದ ರವಿಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಕನ್ಯಾ ಮನೆಗೆ ಹಿಂದಿರುಗಿದಾಗ ಮಕ್ಕಳು ಶಾಲೆಯಿಂದ ಬಂದು ಮನೆ ಮುಂದೆ ಕಾಯುತ್ತಿದ್ದರು. ಬಾಗಿಲು ಬಡಿದರೂ ತೆರೆಯದಾಗ, ಫೋನ್ ಮಾಡಿದರೂ ರಿಸೀವ್ ಮಾಡದ ರವಿಕುಮಾರ್ ಬಗ್ಗೆ ಅನುಮಾನಗೊಂಡು ಅಕ್ಕಪಕ್ಕದವರ ಸಹಾಯದಿಂದ ಬಾಗಿಲು ಹೊಡೆದು ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.
ಸುಕನ್ಯಾಗೆ ಅಕ್ರಮ ಸಂಬಂಧವಿತ್ತು. ಈ ಸಂಬಂಧ ಆಗಾಗ ಇಬ್ಬರ ಮಧ್ಯೆ ಜಗಳಗಳು ಆಗುತ್ತಿದ್ದವು. ಇದರಿಂದ ನಿರುಪದ್ರವಿ ರವಿ ಕುಡಿತದ ಚಟ ಅಂಟಿಸಿಕೊಂಡಿದ್ದ. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ರವಿ ಅವರ ತಂದೆ ರಾಮಚಂದ್ರಪ್ಪ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿಂದೆ ಇವರು ಕೋಲಾರದಲ್ಲಿ CARನಲ್ಲಿ 10 ವರ್ಷ ಕಾಲ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿದ್ದರು. 2010ರಲ್ಲಿ ಕೆಎಎಸ್ ಪರೀಕ್ಷೆ ಪಾಸು ಮಾಡಿ, ಶಿಡ್ಲಘಟ್ಟ ಉಪ ಖಜಾನೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.












Click it and Unblock the Notifications