ಐವರು ಭಾರತೀಯ ಯೋಧರ ಕೊಂದ ಪಾಕಿಗಳು
ಶ್ರೀನಗರ, ಆ.6: ಕದನ ವಿರಾಮ ಉಲ್ಲಂಘಿಸಿ ಗಡಿಯೊಳಗೆ ನುಗ್ಗಿದ ಪಾಕಿಸ್ತಾನದ ಯೋಧರು, ಐವರು ಭಾರತೀಯ ಯೋಧರನ್ನು ಕೊಂದು ಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐದು ಮಂದಿ ಭಾರತೀಯ ಯೋಧರನ್ನು ಸೋಮವಾರ ಮಧ್ಯರಾತ್ರಿ ಹತ್ಯೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಟ್ವೀಟರ್ ನಲ್ಲಿ ಈ ದಾಳಿಯನ್ನು ದೃಢಪಡಿಸಿದ್ದಾರೆ. ಪಾಕಿಸ್ತಾನದ ಸೇನೆ ಭಾರತದ ಗಡಿಯೊಳಗೆ ಪ್ರವೇಶಿಸಿ ಚಕನ್ ದ ಬಾಘ್ ನಲ್ಲಿ ಗಡಿ ಕಾಯುತ್ತಿದ್ದ ಯೋಧರನ್ನು ಹತ್ಯೆ ಮಾಡಿದೆ ಎಂದು ವರದಿಗಳು ಹೇಳಿವೆ.
ಮಂಗಳವಾರ ಮುಂಜಾನೆ ನಮಗೆ ಐವರು ಭಾರತೀಯ ಸೈನಿಕರ ಹತ್ಯೆಯಾಗಿರುವ ವಿಚಾರ ಗೊತ್ತಾಗಿದೆ. ಹತ ಭಾರತೀಯ ಸೈನಿಕರ ಕುಟುಂಬಕ್ಕೆ ನಮ್ಮ ಸಾಂತ್ವನಗಳುಸಲ್ಲುತ್ತವೆ ಎಂದು ಒಮರ್ ಹೇಳಿದ್ದಾರೆ.

ಕಳೆದ ಕೆಲವು ಸಮಯದಿಂದ ಭಾರತದ ಗಡಿಯ ಮೇಲೆ ಪಾಕ್ ದಾಳಿ ಮಾಡುತ್ತಲೇ ಇದೆ. ಅದರಲ್ಲೂ ನವಾಜ್ ಷರೀಫ್ ಪ್ರಧಾನಿಯಾದ ಬಳಿಕ ಇದು ಮತ್ತಷ್ಟು ಹೆಚ್ಚಿದೆ. ಇದರಿಂದ ಈಗ ಎರಡು ದೇಶಗಳ ನಡುವಿನ ಮಾತುಕತೆಗೆ ಭಾರೀ ಹಿನ್ನಡೆಯಾಗಿದೆ.
ಸೇನಾ ಮುಖ್ಯಸ್ಥ ಜನರಲ್ ಬಿಕ್ರಮ್ ಸಿಂಗ್ ಅವರು ಸೇನೆಯು ಗಡಿಯಲ್ಲಿ ನಡೆದಿರುವ ಈ ಘಟನೆಯ ಬಗ್ಗೆ ಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದೆ.
ಈ ಹಿಂದಿನ ಕದನ ವಿರಾಮ ಉಲ್ಲಂಘನೆ:
* 1999ರಲ್ಲಿ ಕಾರ್ಗಿಲ್ ಯುದಟಛಿದ ವೇಳೆಯೂ ಪಾಕ್ ಸೈನಿಕರು ಮಾನವೀಯತೆಯನ್ನೇ ಮರೆತಿದ್ದರು. ಅಂದಿನ ಘರ್ಷಣೆಯಲ್ಲಿ ಕ್ಯಾಪ್ಟನ್ ಸೌರಭ್ ಕಾಲಿಯಾ ಮತ್ತವರ ತಂಡದ ಮೇಲೆ ಪಾಕ್ ನ ಕಾಕ್ಸಾರ್ ವಿಭಾಗದ ಸೈನಿಕರು ಹೇಯ ದಾಳಿ ನಡೆಸಿದ್ದರು.
* 2009 ರಲ್ಲಿ 51 ಕದನ ವಿರಾಮ ಉಲ್ಲಂಘನೆ
* 2010ರಲ್ಲಿ 28 ಬಾರಿ ಪಾಕ್ ಸೈನಿಕರ ಉಪಟಳ
* 2011ರಲ್ಲಿ 44 ಬಾರಿ ಪಾಕಿಗಳು ಶಾಂತಿ ಕದಡಿದ್ದಾರೆ.
* 2012ರಲ್ಲಿ ಉತ್ತರ ಕಾಶ್ಮೀರದ ಚುರುಂಡಾ ಪ್ರದೇಶದ ಉರಿ ವಿಭಾಗದಲ್ಲಿ ಪಾಕಿಸ್ಥಾನ ಸೈನಿಕರ ಗುಂಡಿಗೆ ಮೂವರು ನಾಗರಿಕರು ಬಲಿಯಾಗಿದ್ದರು.
* 2013ರ ಆರಂಭದಲ್ಲಿ ಪಾಕ್ ಯೋಧರು ಜಮ್ಮು ಮತ್ತು ಕಾಶ್ಮೀರದೊಳಕ್ಕೆ ನುಗ್ಗಿ ಇಬ್ಬರು ಭಾರತೀಯ ಯೋಧರನ್ನು ಬರ್ಬರವಾಗಿ ಕತ್ತು ಕೊಯ್ದು ಸಾಯಿಸಿದ್ದರು.
* ಕಳೆದ ಒಂದು ವರ್ಷದಲ್ಲಿ ಪಾಕಿಸ್ಥಾನ 71 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಉಭಯ ಸೈನಿಕರ ಮಧ್ಯೆ 71 ಬಾರಿ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ನಾಲ್ವರು ಸೇನಾಧಿಕಾರಿಗಳು ಸೇರಿದಂತೆ 7 ಮಂದಿ ಅಸುನೀಗಿದ್ದು, 15 ಮಂದಿ ಗಾಯಗೊಂಡಿದ್ದರು. ಆದರೆ, ಪ್ರತಿ ಬಾರಿಯಂತೆ ಈ ಬಾರಿ ಕೂಡಾ ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳು ಕದನ ವಿರಾಮ ಉಲ್ಲಂಘಿಸಿಲ್ಲ. ಗಡಿ ದಾಟಿಲ್ಲ. ನಾವುದೇ ಪ್ರಚೋದನಕಾರಿ ದಾಳಿ ನಡೆಸಿಲ್ಲ ಎಂದು ಪ್ರತಿಕ್ರಿಯಿಸಿದೆ.












Click it and Unblock the Notifications