ಬೆಂಗಳೂರಿನ ಕಿತ್ತುಹೋದ ರಸ್ತೆಗೆ ಮತ್ತೊಂದು ಸೇರ್ಪಡೆ
ಬೆಂಗಳೂರು, ಆ. 6 : ಬೆಂಗಳೂರಿನ ಹಲವಾರು ಕಡೆಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಕಿತ್ತುಹೋಗಿರುವ ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದೆಷ್ಟು ದಿನ ಉಳಿಯತ್ತೋ ಗೊತ್ತಿಲ್ಲ. ಅಂತೂ ಅಲ್ಲಲ್ಲಿ ಕೆಲಸ ಮಾಡುತ್ತಿರುವುದಂತೂ ದಿಟ.
ಅಂಥದೊಂದು, ಕನಿಷ್ಠಪಕ್ಷ ತೇಪೆ ಹಚ್ಚಲಾದರೂ ಬನ್ರಪ್ಪಾ ಎಂದು ಮೈಸೂರು ರಸ್ತೆಯಲ್ಲಿರುವ, ರಾಜರಾಜೇಶ್ವರಿ ನಗರದ ಹೆಬ್ಬಾಗಿಲು ಮತ್ತು ಪಕ್ಕದಲ್ಲಿರುವ ಗೋಪಾಲನ್ ಆರ್ಕೇಡ್ ಮುಂದಿನ ರಸ್ತೆ ಹಲವಾರು ದಿನಗಳಿಂದ ಗೋಗರೆಯುತ್ತಿದೆ. ಆದರು ಅದು ಮೂಕರೋದನವಾಗಿರುವುದರಿಂದ ಯಾರ ಕಿವಿಗೂ ಕೇಳುತ್ತಿಲ್ಲ.
ದಿನಂಪ್ರತಿ ಈ ರಸ್ತೆಯಲ್ಲಿ ಎಷ್ಟು ಬಸ್ಸು, ಲಾರಿ, ಕಾರು, ಬೈಕು, ಆಟೋ, ವ್ಯಾನುಗಳು ಚಲಿಸುತ್ತವೆಯೋ ಲೆಕ್ಕ ಇಡಲು ಸಾಧ್ಯವೇ ಇಲ್ಲ. ಟೋಪಾಜ್ ರೇಜರ್ ಬ್ಲೇಡಿನ ಜಾಹೀರಾತಿನಂತೆ ವಾಹನಗಳೆಲ್ಲ ಬಂಪಿ ರಸ್ತೆಯ ಮೇಲೆ ಓಡುತ್ತಿದ್ದರೆ, ಅದರೊಳಗೆ ಕೂತಿರುವ ಜನರು ಕಂಟ್ರೋಲ್ ಇಲ್ಲದಂತೆ ತಲೆದೂಗುತ್ತ ಚಲಿಸುತ್ತಿರುತ್ತಾರೆ.
ಇದು ಆ ರಸ್ತೆಯ ಮೇಲೆ ಆಗುತ್ತಿರುವ ದೌರ್ಜನ್ಯವಲ್ಲದೆ ಮತ್ತೇನೂ ಅಲ್ಲ. ಎಷ್ಟು ದಿನವಂತ ಈ ದೌರ್ಜನ್ಯವನ್ನು ರಸ್ತೆಯಾದರೂ ಸಹಿಸೀತು? ಕೊನೆಗೊಂದು ದಿನ ಯಾರನ್ನಾದರೂ ಎತ್ತಿಹಾಕಿ, ಕೈಕಾಲು ಮುರಿದು, ಕೊನೆಗೆ ಜೀವವನ್ನಾದರೂ ತೆಗೆಯದೆ ಬಿಡುವುದಿಲ್ಲ. ಇಷ್ಟಾದ ಮೇಲೆ ಬಿಬಿಎಂಪಿ ನೌಕರರು ಎದ್ದುಬಿದ್ದು ಓಡಿಬಂದು ತಮ್ಮ 'ಕರ್ತವ್ಯ' ನಿಭಾಯಿಸಿರುತ್ತಾರೆ.

ಸವಾರರಿಗೆ ಕೊಚ್ಚೆ ನೀರಿನ ಅಭಿಷೇಕ
ಇನ್ನು ನಾಲ್ಕಾರು ಹನಿ ಮಳೆ ಬಿದ್ದರಂತೂ ರಸ್ತೆಯಲ್ಲಿ ಅಡ್ಡಾಡುವವರ ಗೋಳು ಕೇಳುವುದೇ ಬೇಡ. ಒಂದು ಬೈಕು ದಾಟಿ ಹೋದರೂ ಸಾಕು, ಪಕ್ಕದ ವಾಹನಕ್ಕೂ, ಬೈಕ್ ಆಗಿದ್ದರೆ ಅದರ ಮೇಲೆ ಅಥವಾ ಆಟೋ ಆಗಿದ್ದರೆ ಅದರ ಒಳಗೆ ಕುಳಿತವರಿಗೂ ಕೊಚ್ಚೆ ನೀರಿನ ಅಭಿಷೇಕವಾಗಿರುತ್ತದೆ.

ಗರ್ಭಿಣಿಯರಿಗೆ ಈ ರಸ್ತೆ ನಿಷೇಧ
ಮಳೆ ನೀರು ತುಂಬಿ ನಿಂತಾಗ ರಸ್ತೆ ಸಮತಟ್ಟಾಗಿದೆ ಎಂದು ಜೋರಾಗಿ ವಾಹನ ಚಲಾಯಿಸಿದರೆ ಮುಂದಿದ್ದವರ ಸ್ಥಿತಿ ಗೋವಿಂದಾ ಗೋವಿಂದಾ. ಗರ್ಭಿಣಿಯರು ಈ ರಸ್ತೆಯಲ್ಲಿ ಅಡ್ಡಾಡುವುದನ್ನು ನಿಷೇಧಿಸುವುದು ಒಳಿತು. ಗರ್ಭಪಾತ ಆದರೆ ಅದಕ್ಕೆ ಪರಿಹಾರವನ್ನು ಬಿಬಿಎಂಪಿ ತುಂಬಿಕೊಡುತ್ತಾ?

ಪೊಲೀಸರೇ ಹೀಗಂದರೆ ಸಾಮಾನ್ಯರ ಪಾಡೇನು
ಈ ರಸ್ತೆಯ ಚಿತ್ರ ತೆಗೆಯುತ್ತಿದ್ದಾಗ ಕೆಂಗೇರಿ ಉಪನಗರದ ಬಳಿಯಿಂದ ವಾಹನದಲ್ಲಿ ಬಂದ ಪೊಲೀಸ್ ಅಧಿಕಾರಿಯೊಬ್ಬರು, 'ಏನ್ಸಾರ್ ಪೇಪರಲ್ಲಿ ಹಾಕ್ತೀರಾ? ಸರೀ ಉಗಿದುಬಿಟ್ಟು ಹಾಕಿ' ಎಂದು ಉಪದೇಶ ನೀಡಿ ಮುಂದುವರಿದರು. ಪೊಲೀಸರೇ ಹೀಗಂದರೆ ಸಾಮಾನ್ಯರ ಪಾಡೇನು ಊಹಿಸಿ.

ಈ ರಸ್ತೆಯಲ್ಲಿ ರೇಸಿಂಗ್ ಸಾಧ್ಯವಿಲ್ಲ
ಹೊಸದಾಗಿ ಈ ರಸ್ತೆಯಲ್ಲಿ ಬಂದವರಿಗೆ ಮುಂದೆ ಹೇಗಿದೆ ಎಂಬ ಬಗ್ಗೆ ಅರಿವೇ ಇರುವುದಿಲ್ಲ. ಮುಂದಿನವ ನಿಧಾನವಾಗಿ ಚಲಿಸುತ್ತಿದ್ದರೆ, ಹಿಂದಿದ್ದವ ಬಾಯಿಗೆ ಬಂದಂತೆ ಬೈದುಕೊಂಡು, ಕಿವಿ ಕಿತ್ತುಹೊಗುವಂತೆ ಹಾರ್ನ್ ಹಾಕುತ್ತಿರುತ್ತಾರೆ. ಎರಡು ಹೆಜ್ಜೆ ಮುಂದೆ ಬಂದಾಗ ದಿಗ್ದರ್ಶನ ಅವರಿಗಾಗಿರುತ್ತದೆ. ಈ ರಸ್ತೆಯಲ್ಲಿ ರೇಸಿಂಗ್ ಸಾಧ್ಯವಿಲ್ಲ.

ವಿರುದ್ಧ ದಿಕ್ಕಿನಿಂದ ಬರುವ ಬೈಕು
ಇದು ಸಾಲದೆಂಬಂತೆ ರಸ್ತೆಗೆ ವಿರುದ್ಧ ದಿಕ್ಕಿನಿಂದ ಬರುವ ಬೈಕು ಸವಾರರ ಸಂಖ್ಯೆಯೇನು ಕಡಿಮೆಯಿಲ್ಲ. ಪಕ್ಕದಲ್ಲಿ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೇಬಲ್ ನಿಂತಿದ್ದರೂ ರಾಂಗ್ ಸೈಡಲ್ಲಿ ಹಾಗೇ ಬರುತ್ತಿರುತ್ತಾರೆ. ಪೊಲೀಸರೂ ಹಾಗೇ ನಿಂತಿರುತ್ತಾರೆ.

ಈ ಸಮಸ್ಯೆಗೊಂದು ಪರಿಹಾರ ದೊರಕಿಸಿ
ಮಳೆಗಾಲ ಮುಗಿಯುವುದರೊಳಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಸಮಸ್ಯೆಗೊಂದು ಪರಿಹಾರ ದೊರಕಿಸಿಕೊಡುವುದೆ? ಬರೀ ತೇಪೆ ಕೆಲಸ ಮಾಡದೆ ಪರ್ಮನೆಂಟಾಗಿ ಸಮತಟ್ಟಾದ ರಸ್ತೆ ನಿರ್ಮಿಸಿ ಡಾಂಬರು ಬಳಿಯಲಿ.

ಇಂಥ ಸಮಸ್ಯೆ ಕಂಡುಬಂದರೆ...
ನಾವು ದಿನನಿತ್ಯ ಓಡಾಡುವ ರಸ್ತೆಗಾಗಿ ತೆರಿಗೆ ನೀಡುತ್ತಿದ್ದೇವೆ ಎಂಬುದನ್ನು ನಾವು ಮರೆಯಬಾರದು. ಬಿಬಿಎಂಪಿ ಮರೆತಿದ್ದರೂ ನೆನಪಿಸುವ ಕರ್ತವ್ಯವನ್ನು ನಾಗರಿಕರಾದ ನಾವು ನಿಭಾಯಿಸಬೇಕು. ಇಂಥ ಸಮಸ್ಯೆ ಕಂಡುಬಂದರೆ ಏನು ಮಾಡಬೇಕು? 22660000 ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು.












Click it and Unblock the Notifications