ಬಿಜೆಪಿ ಜೊತೆ ಮೈತ್ರಿ ಮುರಿದ ದೇವೇಗೌಡರು!

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡ, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಲೋಕಸಭಾ ಉಪ ಚುನಾವಣೆ ಮತ್ತು ಮೂರು ವಿಧಾನಪರಿಷತ್ ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆ ಪಕ್ಷದ ಜೊತೆ ಚುನಾವಣೆಯಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ದೇವೇಗೌಡರು ಹೇಳಿದರು. ಏಕಾಂಗಿಯಾಗಿ ಜೆಡಿಎಸ್ ಚುನಾವಣೆ ಎದುರಿಸಲಿದೆ. ಜನರ ಬೆಂಬಲ ನಮ್ಮ ಪಕ್ಷಕ್ಕಿದೆ ಎಂದು ಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪು ಜೊತೆ ಜೆಡಿಎಸ್ ಪಕ್ಷ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂದು ಕೆಲವು ವ್ಯಕ್ತಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳುವಂತಹ ದುಸ್ಥಿತಿ ನಮಗೆ ಬಂದಿಲ್ಲ ಎಂದು ದೇವೇಗೌಡರು ಗುಡುಗಿದರು. ನನ್ನ ನೇತೃತ್ವದಲ್ಲೇ ಎರಡು ಚುನಾವಣೆಗಳನ್ನು ಎದುರಿಸಲಾಗುವುದು. ಚುನಾವಣೆಯನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ ಎಂದರು.
ಈ ಚುನಾವಣೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ದೇವೇಗೌಡ ಅವರ ವಿರುದ್ಧದ ಹೋರಾಟ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ ಇದರಿಂದ ತಮಗೆನೂ ನಷ್ಟವಿಲ್ಲ. ಉಪ ಚುನಾವಣೆಯನ್ನು ಹೇಗೆ ಬೇಕಾದರೂ ವಿಶ್ಲೇಷಣೆ ಮಾಡಿಕೊಳ್ಳಿ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ನನ್ನ ಕೊನೆಯ ಹೋರಾಟ : ಎರಡೂ ಕ್ಷೇತ್ರಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷನಿಂದ ಹಿಡಿದು ಎಲ್ಲಾ ಕಾರ್ಯಕರ್ತರ ಸಂಪರ್ಕ ನನಗೆ ಇದೆ. ಇದು ನನ್ನ ಕೊನೆ ಹೋರಾಟ. ದೇವೇಗೌಡರು ಕೊನೆಯ ಹೋರಾಟದಲ್ಲಿ ಸೋಲಬಾರದು ಎಂದು ಜನರು ನಮ್ಮನ್ನು ಬೆಂಬಲಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಸೌಜನ್ಯ ಮರೆಯಾಗಿದೆ : ರಾಜ್ಯ ರಾಜಕಾರಣದಲ್ಲಿ ಸೌಜನ್ಯ ಸಂಸ್ಕೃತಿ ಮರೆಯಾಗಿದೆ. ಎಷ್ಟು ವೈರತ್ವವಿದ್ದರೂ ರಾಮಕೃಷ್ಣ ಹೆಗಡೆ ಮತ್ತು ಬಿ.ಎಸ್.ಯಡಿಯೂರಪ್ಪ ತಮ್ಮ ಜೊತೆ ಮಾತುಕತೆ ನಡೆಸುತ್ತಿದ್ದರು. ಇಂದು ಆ ಸೌಜನ್ಯ ಮರೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಎಡ ಪಕ್ಷಗಳೊಂದಿಗೆ ಹೊಂದಾಣಿಕೆ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಡಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ದೇವೇಗೌಡರು ತಿಳಿಸಿದರು. ನಮ್ಮ ಮೈತ್ರಿ, ಹೊಂದಾಣಿಕೆ ಎಡ ಪಕ್ಷಗಳೊಂದಿಗೆ ಮಾತ್ರ ಬೇರೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications