ಉದ್ದೇಶಪೂರ್ವಕವಾಗಿ ತಂದೆಯ ಹೆಸರು ಕೈಬಿಟ್ಟ ರಮ್ಯಾ
ಮಂಡ್ಯ, ಆಗಸ್ಟ್ 5: ಸಾಕುತಂದೆಯ ಹಠಾತ್ ನಿಧನದಿಂದ ನಟಿ ರಮ್ಯಾ ಅವರಿಗೆ ಚುನಾವಣೆ ಸ್ಪರ್ಧೆ ಬಗ್ಗೆ ವೈರಾಗ್ಯ ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನು ತಡೆಗಟ್ಟಲು/ನಿಯಂತ್ರಿಸಲು ಕಾಂಗ್ರೆಸ್ ಪಕ್ಷದ ದೊಡ್ಡ ಪಟಾಲಮ್ಮೇ ರಮ್ಯಾ ಹಿಂದೆಮುಂದೆ ಠಳಾಯಿಸುತ್ತಿದ್ದು, ಹೇಗಾದರೂ ಮಾಡಿ ಅವರು ಮತ್ತೆ ಚುನಾವಣೆಯತ್ತ ಮುಖ ಮಾಡುವಂತೆ ಎಲ್ಲ ತಂತ್ರಗಳನ್ನೂ ಅನುಸರಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಮಧ್ಯೆ, ರಮ್ಯಾ ಸಾಕುತಂದೆ ನಾರಾಯಣ್ ವಿಧಿವಶರಾದರು ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಸಾರ್ವಜನಿಕರಲ್ಲಿ ಅನುಕಂಪ-ಮಿಶ್ರಿತ ಕುತೂಹಲವೂ ಮೂಡಿದೆ. ಈ ಹಿಂದೆಯೂ ಇಂತಹುದೇ ಪರಿಸ್ಥಿತಿ ಎದುರಾಗಿತ್ತು. 'ರಮ್ಯಾ ತಂದೆ ಹಿರಿಯ ಕಾಂಗ್ರೆಸ್ ನಾಯಕ ಎಸ್ಎಂ ಕೃಷ್ಣ ಅವರಂತೆ' ಎಂದು ಜನ ಮಾತನಾಡಕೊಳ್ಳತೊಡಗಿದರು.
ಇದು ರಮ್ಯಾ ಮೇಡಂ ಕಿವಿಗೂ ಬಿದ್ದು ಅವರು ನಖಶಿಖಾಂತ ಉರಿದುಹೋದರು. 'ನಾನ್ಸೆನ್ಸ್! ಎಸ್ಎಂ ಕೃಷ್ಣ ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ' ಎಂದು ಖಡಾಖಂಡಿತವಾಗಿ ಘೋಷಿಸಿದ್ದರು. ಜನ ಸಹ ರಮ್ಯಾ ತಂದೆಯ ಬಗ್ಗೆ ಅಲ್ಲಿಗೆ ಮರೆತುಹೋಗಿದ್ದರು.

ಮತ್ತದೇ ಅನುಕಂಪ-ಮಿಶ್ರಿತ ಕುತೂಹಲದ ಪ್ರಶ್ನೆ
ಆದರೆ ಈಗ ರಮ್ಯಾ ಚುನಾವಣಾ ಕಣಕ್ಕಿಳಿದಿದ್ದಾರೆ. ಸಾರ್ವಜನಿಕ ಜೀವನಕ್ಕೆ ಈಗ ಮತ್ತಷ್ಟು ಹತ್ತಿರವಾಗಿದ್ದಾರೆ. ಅದೂ 'ಮೊನ್ನೆ ಮೃತಪಟ್ಟ ನಾರಾಯಣ್ ಅವರು ರಮ್ಯಾರ ಸಾಕುತಂದೆಯಂತೆ. ತಾಯಿಯ ಹೆಸರು ರಂಜಿತಾ ಮಂಡ್ಯ ಬೋರಯ್ಯ' ಎಂಬ ಸುದ್ದಿ ಹೊರಬೀಳುತ್ತಿದ್ದಂತೆ 'ಅದೆಲ್ಲಾ ಸರಿ ರಮ್ಯಾ ಅವರ ಅಪ್ಪ ಯಾರು?' ಎಂದು ಜನ ಮತ್ತೆ ಅದೇ ಅನುಕಂಪ-ಮಿಶ್ರಿತ ಕುತೂಹಲದಿಂದ ಪ್ರಶ್ನಿಸುತ್ತಿದ್ದಾರೆ.

ಕೃಷ್ಣ ತಂದೆಯಲ್ಲ ಅಂದಿದ್ದ ರಮ್ಯಾ ಅಪ್ಪನ ಹೆಸರು ನಮೂದಿಸಿಲ್ಲ
'ನಟಿ ರಮ್ಯಾ ಹೆಚ್ಚು ಸಾರ್ವಜನಿಕವಾಗುತ್ತಿರುವ ಈ ಸಂದರ್ಭದಲ್ಲಿ ಅವರು ತಮ್ಮ ತಂದೆ ಯಾರು ಎಂಬುದನ್ನು ಬಹಿರಂಗಪಡಿಸಬೇಕು' ಎಂಬ ಒತ್ತಾಯ ಸಹಜವಾಗಿಯೇ ಜನರ ಮಧ್ಯೆ ಕೇಳಿಬಂದಿದೆ. ಆದರೆ ಇದಕ್ಕೆ ಉತ್ತರ ಪ್ರಕಟಗೊಳ್ಳುವ ಬದಲು ಮತ್ತೆ ಅದೇ ಪ್ರಶ್ನೆ ಮೂಡುವಂತೆ ರಮ್ಯಾ ಸಹ ನಡೆದುಕೊಂಡಿದ್ದಾರೆ.

ಅಫಿಡವಿಟಿನಲ್ಲಿ ತಂದೆ ಹೆಸರನ್ನು ಮರೆಮಾಚಿದ ನಟಿ ರಮ್ಯಾ
ಮೊನ್ನೆ ಶನಿವಾರ ಮಂಡ್ಯ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ರಮ್ಯಾ ಅಫಿಡವಿಟ್ ನಲ್ಲಿ ಉದ್ದೇಶಪೂರ್ವಕವಾಗಿಯೇ ತಂದೆಯ ಹೆಸರನ್ನು ನಮೂದಿಸಿಲ್ಲ. ಜತೆಗೆ ತಮ್ಮ ಜಾತಿ ಯಾವುದು ಎಂಬುದನ್ನೂ ನಮೂದಿಸಿಲ್ಲ. ಇದರಿಂದ ಜನರಲ್ಲಿ ಮತ್ತದೇ ಪ್ರಶ್ನೆ ಉದ್ಭವವಾಗಿದೆ. ಉತ್ತರ?

ರಮ್ಯಾ ತಾಯಿ ರಂಜಿತಾ ಪ್ರಭಾವಿ ನಾಯಕಿ
ಅಂದಹಾಗೆ ರಮ್ಯಾ ಅವರ ತಾಯಿ ರಂಜಿತಾ ಜಿಲ್ಲೆಯ ಪ್ರಭಾವಿ ನಾಯಕ ಎಸ್ಎಂ ಕೃಷ್ಣ ಅವರಿಗೆ ಅತ್ಯಾಪ್ತರು. ಜತೆಗೆ, ರಂಜಿತಾ ಅವರು ಮಂಡ್ಯ ಕಾಂಗ್ರೆಸ್ಸಿನಲ್ಲಿ ಸಕ್ರಿಯ ಸದಸ್ಯೆ. ಹಾಗಾಗಿ, ಕಳೆದ ಲೋಕಸಭೆ ಚುನಾವಾಣೆಗೆ ಸ್ವತಃ ತಾವೇ ಕಣಕ್ಕಿಳಿಯಲು ಯತ್ನಿಸಿದ್ದರು. ಆದರೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಹಾಗಂತ ರಂಜಿತಾ ಅವರೂ ಎದೆಗುಂದಲಿಲ್ಲ. ಕೃಷ್ಣರ ಸೋದರ ಸಂಬಂಧಿ ಗುರುಶರಣ್ ಅವರು ಮದ್ದೂರು ಚುನಾವಣೆಗೆ ನಿಂತಾಗ ಅವರ ಪರ ವ್ಯಾಪಕವಾಗಿ ಪ್ರಚಾರ ನಡೆಸಿದರು. (ಚಿತ್ರದಲ್ಲಿ ತಾಯಿ ರಂಜಿತಾ ಜತೆ ರಮ್ಯಾ- ಮಿಡ್ ಡೇ ಚಿತ್ರ)

ನಟಿ ರಮ್ಯಾ ವಿದ್ಯಾಭ್ಯಾಸ ಪಿಯುಸಿ
ಅಂದಹಾಗೆ ಮಂಡ್ಯ ಲೋಕಸಭೆ ಉಪ ಚುನಾವಣೆಗೆ ದಿವ್ಯಸ್ಪಂದನ ಎಂಬ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿರುವ ನಟಿ ರಮ್ಯಾ ವಿದ್ಯಾಭ್ಯಾಸ ಪಿಯುಸಿ. ಊಟಿಯಲ್ಲಿ 1999ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ್ದರೆ, ಚೆನ್ನೈನಲ್ಲಿ ಪಿಯುಸಿ ಶಿಕ್ಷಣವನ್ನು 2001ರಲ್ಲಿ ಪೂರೈಸಿದ್ದಾರೆ. ತಾಯಿ ಎಂ ಬಿ ರಂಜಿತಾ. ತಂದೆ ಹೆಸರು ಮತ್ತು ಜಾತಿ ಕಾಲಂ ಖಾಲಿ ಬಿಟ್ಟಿದ್ದಾರೆ.
ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟಿನಲ್ಲಿ ರಮ್ಯಾ ತಮ್ಮ ಸ್ಥಿರ ಹಾಗೂ ಚರಾಸ್ತಿ ವಿವರಗಳನ್ನು ಒದಗಿಸಿದ್ದು, ವಾರ್ಷಿಕ ಆದಾಯ ಅರ್ಧ ಕೋಟಿ ರೂ.ಗೂ ಹೆಚ್ಚು ಇದೆ. ಅವರ ಬಳಿ 15.92 ಲಕ್ಷ ರೂ. ಚರಾಸ್ತಿಯಿದೆಯಂತೆ.

ಶಾಂತಿನಗರ ಫ್ಲ್ಯಾಟ್ ಮೌಲ್ಯ 2 ಕೋಟಿ ರೂ
ಶಾಂತಿನಗರದಲ್ಲಿ ಖರೀದಿಸಿರುವ ಫ್ಲ್ಯಾಟ್ ಮೌಲ್ಯ 1.72 ಕೋಟಿ ರೂ. ಈಗಿನ ಬೆಲೆ 2 ಕೋಟಿ ರೂ. ವಾರ್ಷಿಕ ಆದಾಯ 61.42 ಲಕ್ಷ ರೂ. ಸಾಲದ ಪ್ರಮಾಣ 52.23 ಲಕ್ಷ ರೂ., 450 ಗ್ರಾಂ ಚಿನ್ನಾಭರಣವಿದ್ದು, ಇದರ ಮೌಲ್ಯ 13.71 ಲಕ್ಷ ರೂ. ಇದರಲ್ಲಿ ಬೆಂಗಳೂರಿನ ಎಸ್ ಬಿಐ ಬ್ಯಾಂಕ್ ಖಾತೆಯಲ್ಲಿ 1,70,986 ರೂ. ಇರಿಸಲಾಗಿದೆ. ಕೈಯಲ್ಲಿ ಇರುವ ಮೊತ್ತ 50 ಸಾವಿರ, ರೂ. 2 ಕೋಟಿ ರೂ. ಸ್ಥಿರಾಸ್ತಿಯೂ ಇದೆ ಎನ್ನುತ್ತಿದೆ ರಮ್ಯಾರ ಅಫಿಡವಿಟ್.












Click it and Unblock the Notifications