ಇಬ್ಬರು ಪುತ್ರಿಯರಿದ್ದ ಆಟೋಗೆ ಬೆಂಕಿಹಚ್ಚಿದ ಧೂರ್ತ ಅಪ್ಪ

ಮೇಘಾನಿಗರ್ ಸಿಐಡಿ ಕ್ಯಾಂಪಸ್ಸಿನಲ್ಲಿ ಗುರುವಾರ ಈ ದುರ್ಘಟನೆ ನಡೆದಿದೆ. ನರೋಡಾದ ನಿವಾಸಿ 40 ವರ್ಷದ ಗೋವಿಂದ ರಾಥೋಡ್ ಈ ದುಷ್ಕೃತ್ಯವೆಸಗಿದ ಭೂಪ. ಸಬರಮತಿ ಗಾಂಧಿ ಆಶ್ರಮದಲ್ಲಿರುವ ಆಶ್ರಮಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇನ್ನೂ ಇಬ್ಬರು ಪುತ್ರಿಯರನ್ನು ಹೀಗೇ ಸಾಯಿಸಲು ನಿರ್ಧರಿಸಿದ್ದಾಗಿ ಪೊಲೀಸರ ತನಿಖೆಯ ವೇಳೆ ಗೋವಿಂದ ಹೇಳಿದ್ದಾನೆ.
'ಅಯ್ಯೋ ಗೋವಿಂದ! ಸಿಐಡಿ ಕಚೇರಿಯಲ್ಲಿ ಕೆಲಸದಲ್ಲಿದ್ದಾಗಲೂ ತನ್ನ ಪತಿರಾಯ ಕೋಪಾವೇಶದಿಂದ ಬಳಲುತ್ತಿದ್ದ. ಹಾಗಾಗಿ ನಾನು ಮತ್ತು ನನ್ನ ಅತ್ತೆ-ಮಾವ ಇವನಿಗಾಗಿ ಒಂದು ಆಟೋ ಖರೀದಿಸಿಕೊಟ್ಟೆವು. ಅದರಿಂದ ಒಬ್ಬನೇ ಏಕಾಂಗಿಯಾಗಿ ಕೆಲಸ ಮಾಡಿಕೊಂಡಿದ್ದು, ಶಾಂತ ಜೀವನ ನಡೆಸುತ್ತಾನೆ ಅಂದುಕೊಂಡಿದ್ದೆವು. ಆದರೆ ಪಾಪಿ ಪತಿರಾಯ ಹೀಗೆ ತನ್ನ ಮಕ್ಕಳನ್ನೇ ಕೊಂದುಬಿಟ್ಟಿದ್ದಾನೆ' ಎಂದು ರಾಥೋಡ್ ಪತ್ನಿ ಇಂದು ಹೇಳಿದ್ದಾರೆ. ಒಮ್ಮೆ ಖುದ್ದು ಗೋವಿಂದನೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಎಂದು ಇಂದು ತಿಳಿಸಿದ್ದಾಳೆ.
ಮಕ್ಕಳಾದ ಪೂನಂ (6) ಮತ್ತು ನೇಹಾ (7)ರನ್ನು ಎಂದಿನಂತೆ ಸ್ಕೂಲಿಗೆ ಬಿಟ್ಟುಬರುತ್ತೇನೆ ಎಂದು ತನ್ನ ಪುತ್ರಿಯರನ್ನು ಆಟೋದಲ್ಲಿ ಕರೆದುಕೊಂಡು ಹೋದವ ಗುರುವಾರ ಮಧ್ಯಾಹ್ನ ಇಂತಹ ದುಷ್ಕೃತ್ಯವೆಸಗಿದ್ದಾನೆ. ಹಿರಾಲ್ (10) ಮತ್ತು ರೇಣುಕಾ (8) ಗೋವಿಂದನ ರೋಶಾವೇಶದಿಂದ ಪಾರಾದ ಮಕ್ಕಳು.
ಗೋವಿಂದನ ಕಥೆ ಇನ್ನೂ ಇದೆ ಕೇಳಿ. 40 ವರ್ಷದ ಗೋವಿಂದನಿಗೆ 1 ವರ್ಷದ ಪುತ್ರ ಜಿಗನೇಶ್ ಸಹ ಇದ್ದಾನೆ. ಆ ಕಂದನನ್ನೂ ಸಾಯಿಸಲು ಗೋವಿಂದ ಮುಂದಾಗಿದ್ದ. ಆಟೋದಲ್ಲಿ ಒಂದು ರೌಂಡ್ ಕರ್ಕೊಂಡು ಹೋಗ್ತೀನಿ ಬಾ ಎಂದು ಮಗುವನ್ನು ಪುಸಲಾಯಿಸಿದ್ದಾನೆ. 'ಆದರೆ ಅದಿನ್ನೂ ಚಿಕ್ಕದು. ನಿನ್ನ ಜತೆ ಆಟೋದಲ್ಲಿ ಕುಳಿತುಕೊಳ್ಳಲು ಅವನಿಗೆ ಆಗುವುದಿಲ್ಲ' ಎಂದು ಇಂದು ತನ್ನ ಪತಿಯನ್ನು ಸಾಗಹಾಕಿದ್ದಳು.
ಆಟೋ ಸಿಎನ್ ಜಿ ಅನಿಲಾಧಾರಿತವಾಗಿದ್ದು, ಮಕ್ಕಳನ್ನು ಹತ್ಯೆ ಮಾಡುವ ಉದ್ದೇಶದೊಂದಿಗೆ ಪೂರ್ವಯೋಜಿತ ರೀತಿಯಲ್ಲಿ ಗೋವಿಂದ ಆಟೋದಲ್ಲಿ ಪೆಟ್ರೋಲ್ ತಂದು ಮಕ್ಕಳನ್ನು ಆಟೋ ಸಮೇತ ಸುಟ್ಟು, ಸಾಯಿಸಿದ್ದಾನೆ ಎಂದು ತನಿಖಾ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications