ಬೆಂಗಳೂರು : ಒಂಟಿ ಮಹಿಳೆಯ ಬರ್ಬರ ಹತ್ಯೆ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ(33) ಕೆಲವು ವರ್ಷಗಳ ಹಿಂದೆ ವಿಚ್ಚೇದನ ಪಡೆದಿದ್ದರು. ಐದು ವರ್ಷದ ಮಗಳೊಂದಿಗೆ ವೆಂಕಟಾದ್ರಿ ಲೇಔಟ್ ನಲ್ಲಿ ವಾಸಿಸುತ್ತಿದ್ದರು. ಮಗಳು ಜಾಗೃತಿ ಎಲ್ ಕೆಜಿ ಓದುತ್ತಿದ್ದಳು.
ಗುರುವಾರ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಜ್ಯೋತಿ ಅವರನ್ನು ಕೊಲೆ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಬಸವೇಶ್ವರ ನಗರದಲ್ಲಿ ವಾಸಿಸುತ್ತಿರುವ ಜ್ಯೋತಿ ಅವರ ತಂದೆ ಮನೆಗೆ ಆಗಮಿಸಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜೆ.ಪಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜ್ಯೋತಿ ಅವರಿಗೆ ಬಂದಿರುವ ಮೊಬೈಲ್ ಕರೆಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಜ್ಯೋತಿ ಅವರ ಮೈಮೇಲಿನ ಆಭರಣ ಮತ್ತು ಮನೆಯಲ್ಲಿದ್ದ ಹಣ ಹಾಗೆ ಇದ್ದು, ಹಳೆಯ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯಿಂದಾಗಿ ಮಗು ಜಾಗೃತಿ ಆಘಾತಕ್ಕೆ ಒಳಗಾಗಿದ್ದು, ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ಯೋತಿ ಅವರ ಮನೆಯ ಪಕ್ಕದಲ್ಲಿ ಖಾಲಿ ನಿವೇಶನವಿದ್ದು, ಅಲ್ಲಿನ ಪೊದೆಯೊಂದರಲ್ಲಿ ರಕ್ತಸಿಕ್ತ ಚಾಕು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಡಿಸಿಪಿ ರೇವಣ್ಣ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications