ಹೊಸ ಕಚೇರಿಯಲ್ಲಿ ಅಡಗಿದೆಯೇ ಶ್ರೀರಾಮುಲು ಅದೃಷ್ಟ?

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಸ್ಆರ್ ಕಾಂಗ್ರೆಸ್, ಪಕ್ಷದ ಕಚೇರಿಯನ್ನು ಬಸವೇಶ್ವರ ನಗರದ ಶಂಕರಮಠ ಬಳಿಗೆ ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದೆ. ಇದರಿಂದ ಕುಮಾರಕೃಪ ರಸ್ತೆಯ ಶುಭೋದಯದಲ್ಲಿ ಇನ್ನು ಪಕ್ಷದ ಕಚೇರಿ ಇರುವುದಿಲ್ಲ.
ಬಿಎಸ್ಆರ್ ಕಾಂಗ್ರೆಸ್ ಪಕ್ಷ ಪ್ರಾರಂಭವಾದ ದಿನದಿಂದ ಕುಮಾರಕೃಪ ರಸ್ತೆಯ ಶುಭೋದಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಾರ್ಪೊರೇಟ್ ಶೈಲಿಯಂತೆ ಸುಸಜ್ಜಿತವಾದ ಈ ಕಟ್ಟಡಕ್ಕೆ, ತಿಂಗಳಿಗೆ ಸುಮಾರು 12 ಲಕ್ಷ ಬಾಡಿಗೆಯನ್ನು ಪಾವತಿಸುತ್ತಿತ್ತು.
ಸದ್ಯ ಬಿಎಸ್ಆರ್ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ಇಂತಹ ಸಮಯದಲ್ಲಿ ಲಕ್ಷಾಂತರ ರೂ ಬಾಡಿಗೆ ಪಾವತಿಸುವುದಕ್ಕಿಂತ, ಕಚೇರಿ ಸ್ಥಳಾಂತರ ಮಾಡಲು ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ತೀರ್ಮಾನಿಸಿದ್ದಾರೆ.
ಕಾರ್ಯಕರ್ತರು ಬರೋಲ್ಲ : ಪಕ್ಷದ ಕಚೇರಿ ಎಷ್ಟು ಹೈಟೆಕ್ ಆಗಿದ್ದರೂ ಅಲ್ಲಿ ಜನರ ಓಡಾಟವಿರಬೇಕು. ಪಕ್ಷದ ಆರಂಭವಾದ ದಿನದಲ್ಲಿ ಕಚೇರಿ ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ಆದರೆ, ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆ ನಂತರ ಕಾರ್ಯಕರ್ತರು ಪಕ್ಷದ ಕಚೇರಿಗೆ ಬರುವುದು ಕಡಿಮೆ ಆಗಿದೆ.
ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಸಹ ಪತ್ರಿಕಾಗೋಷ್ಠಿಗಳನ್ನು ಬಳ್ಳಾರಿಯ ಪಕ್ಷದ ಕಚೇರಿಯಿಂದ ಮಾಡುತ್ತಿದ್ದಾರೆ. ಆದ್ದರಿಂದ ಬೆಂಗಳೂರಿನ ಕಚೇರಿಗೆ ದುಬಾರಿ ಬಾಡಿಗೆಕೊಟ್ಟು ಮುಂದುವರೆಸುವುದು ಬೇಡ ಎಂದು ತೀರ್ಮಾನಿಸಲಾಗಿದ್ದು, ಕಚೇರಿ ಸ್ಥಳಾಂತರಕ್ಕೆ ಮುಂದಾಗಿದ್ದಾರೆ.
ಲೋಕಸಭೆ ಚುನಾವಣೆ ವೇಳೆಗೆ ಪಕ್ಷದ ಕಚೇರಿ ಬಸವೇಶ್ವರ ನಗರಕ್ಕೆ ಸ್ಥಳಾಂತರವಾಗುವುದು ಖಚಿತವಾಗಿದೆ. ಹೊಸ ಕಚೇರಿಯ ಶ್ರೀರಾಮುಲು ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಬಲ ತಂದುಕೊಡಲಿದೆಯೋ ಕಾದು ನೋಡಬೇಕು.












Click it and Unblock the Notifications