ಪರಸಂಗದಲ್ಲಿದ್ದ ಪತ್ನಿಯ ಹತ್ಯೆ ಮಾಡಿದ ಪತಿರಾಯ
ಬೆಂಗಳೂರು, ಆಗಸ್ಟ್1: ಪತ್ನಿಯನ್ನು ಶಿಕ್ಷಕಿಯನ್ನಾಗಿಸಿ, ತನ್ನ ಸಂಸಾರವನ್ನು ಸುಶಿಕ್ಷಿತಗೊಳಿಸುವ ಮಹದಾಸೆ ಹೊಂದಿದ್ದ ಗಾರೆ ಕೆಲಸಗಾರ ಸೇಂದಿಲ್ ಸಿನಿಮಾ ಕಥೆಯಂತೆ ಸಾಗಿದೆ. ಆದರೆ ಅದು ಆಂಟಿ ಕ್ಲೈಮ್ಯಾಕ್ಸ್ ನಲ್ಲಿ ಬುಧವಾರ ದುರಂತ ಅಂತ್ಯ ಕಂಡಿದೆ.
ತಮಿಳುನಾಡಿನಿಂದ ಬಂದು ಸಂಜಯನಗರದಲ್ಲಿ ಗಾರೆ ಕೆಲಸ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳುತ್ತಿದ್ದ ಸೇಂದಿಲ್, ಹೆಚ್ಚಿನ ಶಿಕ್ಷಣಕ್ಕೆಂದು 27 ವರ್ಷದ ಪತ್ನಿಯನ್ನು ಊರಿಗೆ ಕಳುಹಿಸಿದಾಗ ಅಲ್ಲಿ ಆಕೆ ಸಹಪಾಠಿ ಜತೆ ಲವ್ವಿಡವ್ವಿ ನಡೆಸುತ್ತಿರುವುದು ತಿಳಿದು, ರೋಸಿಹೋಗಿ ಇಟ್ಟಿಗೆಯಿಂದಲೇ ಆಕೆಯ ತಲೆಯನ್ನು ಜಜ್ಜಿ, ಬರ್ಬರವಾಗಿ ಆಕೆಯನ್ನು ಸಾಯಿಸಿದ್ದಾನೆ.
ಸಂಜಯನಗರದ ಸಂಜೀವಪ್ಪ ಕಾಲೊನಿಯಲ್ಲಿ ದಂಪತಿ ವಾಸವಾಗಿದ್ದರು. ಸೇಂದಿಲ್ ರಾಣಿಯ 8 ವರ್ಷದ ದಾಂಪತ್ಯಕ್ಕೆ 7 ವರ್ಷದ ಗಂಡು ಮಗು ಇದೆ. 27 ವರ್ಷದ ರಾಣಿ ಕೊಲೆಯಾದವಳು.

ಸೇಂದಿಲ್ ತನ್ನ 'ರಾಣಿಯನ್ನು' ಶಿಕ್ಷಕಿಯನ್ನಾಗಿ ಮಾಡಬೇಕು ಎಂದು ಕನಸು ಕಂಡು ಟಿಸಿಎಚ್ ಮಾಡಲು ತಿರಪತ್ತೂರಿಗೆ ಕಳುಹಿಸಿದ್ದ. ಆದರೆ ಸಹಪಾಠಿಯೊಬ್ಬನೊಂದಿಗೆ ಮೋಹಗೊಂಡ ರಾಣಿ, ತನ್ನ ಪತಿರಾಯ ಸೇಂದಿಲನನ್ನು ಮರೆತು, ಯಾವ ಉದ್ದೇಶಕ್ಕಾಗಿ ತಾನು ಶಿಕ್ಷಣ ಪಡೆಯುತ್ತಿರುವೆ ಎಂಬುದನ್ನೂ ಮರೆತು ಅವನೊಂದಿಗೆ ಪ್ರೀತಿ, ಪ್ರೇಮದಲ್ಲಿ ತೊಡಗಿದ್ದಾಳೆ.
ಇದು ಸೇಂದಿಲನ ಕಿವಿಗೆ ಬಿದ್ದಿದೆ. ಆದರೆ ಸಂಯಮ ಕಳೆದುಕೊಳ್ಳದೆ ಪತ್ನಿಗೆ ತಿಳಿಯಹೇಳಿದ್ದಾನೆ. ಅದೆಲ್ಲಾ ಬೇಡಮ್ಮಿ ಎಂದು ಗೋಗರೆದಿದ್ದಾನೆ. ಇತ್ತೀಚೆಗೆ ಊರಿಗೆ ಹೋಗಿದ್ದ ಸೇಂದಿಲ್ ರಾಣಿಯನ್ನು ಬೆಂಗಳೂರಿಗೆ ಕರೆತಂದಿದ್ದಾನೆ.
ಆದರೆ ರಾಣಿ ಅದಾಗಲೇ ಮತ್ತೊಂದು ದುಂಬಿಯತ್ತ ಮನಸು ಮಾಡಿಯಾಗಿತ್ತು. ಬೆಂಗಳೂರಿಗೆ ಬಂದರೂ ಮೊಬೈಲಿನಲ್ಲಿ ಅವನೊಂದಿಗೆ ಪತಿರಾಯನ ಎದುರೇ ಮಾತನಾಡುವುದನ್ನು ರೂಢಿಸಿಕೊಂಡಿದ್ದಾಳೆ. ಇದರಿಂದ ಸೇಂದಿಲ್ ಸಹನೆಯ ಕಟ್ಟೆ ಒಡೆದಿದೆ. ಜಗಳವನ್ನೂ ಮಾಡಿಕೊಂಡಿದ್ದಾನೆ. ಅದು ವಿಕೋಪಕ್ಕೆ ಹೋಗಿ ನಿನ್ನೆ ಮಧ್ಯಾಹ್ನ ರಾಣಿಯ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ, ಹತ್ಯೆ ಮಾಡಿದ್ದಾನೆ.












Click it and Unblock the Notifications