ಆಂಧ್ರ ಪ್ರಕ್ಷುಬ್ದ: ನಿಂತಲ್ಲೇ ನಿಂತ KSRTC ಬಸ್ಸುಗಳು
ಹೈದರಾಬಾದ್, ಜು 31: ಅಖಂಡ ಆಂಧ್ರ ವಿಭಜನೆಗೆ ತೆಲಂಗಾಣ ಹೊರತು ಪಡಿಸಿ ಸೀಮಾಂಧ್ರ ಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜಂಟಿ ಸಂಯುಕ್ತ ಆಂಧ್ರಪ್ರದೇಶ ಚಳುವಳಿಗಾರರು ಕರೆ ನೀಡಿದ ಬಂದ್ ಹಿಂಸಾಚಾರಕ್ಕೆ ತಿರುಗಿದೆ.
ಆಂಧ್ರ ಪ್ರದೇಶ ಮತ್ತು ಕರ್ನಾಟಕ ರಾಜ್ಯದ ನಡುವಣ ಬಸ್ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಚಳುವಳಿಗಾರರು ಅನಂತಪುರದ ಬಿಜೆಪಿ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ತಿರುಪತಿಯಲ್ಲಿ ನಿಷೇದಾಜ್ಞೆ ಜಾರಿಯಾಗಿದೆ. ಆಂಧ್ರ ಕರಾವಳಿ ಮತ್ತು ರಾಯಲ್ ಸೀಮಾ ಪ್ರಾಂತ್ಯದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥ ಗೊಂಡಿದೆ.
ಪ್ರತಿದಿನ ರಾಜ್ಯದಿಂದ ಸುಮಾರು 480 ಬಸ್ಸುಗಳು ಎರಡು ರಾಜ್ಯಗಳ ನಡುವೆ ಸಂಚರಿಸುತ್ತದೆ. ಅದರಲ್ಲಿ 128 ಬಸ್ಸುಗಳು ಬೆಂಗಳೂರಿನಿಂದ ತಿರುಪತಿಗೆ ಸಂಚರಿಸುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೀಮಾಂಧ್ರ ಪ್ರದೇಶಕ್ಕೆ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಿದೆ.

ಪರಿಸ್ಥಿತಿ ಸುಧಾರಿಸಿದ ನಂತರ ಬಸ್ ವ್ಯವಸ್ಥೆ ಮತ್ತೆ ಎಂದಿನಂತೆ ಇರಲಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿದ ಪ್ರಯಾಣಿಕರ ದುಡ್ಡನ್ನು ವಾಪಾಸ್ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ಎಂಡಿ ಮಂಜುನಾಥ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಈ ನಡುವೆ ಹೈದರಾಬಾದಿನಲ್ಲಿ ಪರಿಸ್ಥಿತಿ ತಿಳಿಯಾಗಿದೆ. ರಾಯಚೂರು - ಹೈದರಾಬಾದ್ ನಡುವಣ ಬಸ್ ಸಂಚಾರ ಎಂದಿನಂತಿದೆ. ರಾಯಚೂರು - ಶ್ರೀಶೈಲಂ ನಡುವಣ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ರಾಯಚೂರು ವಿಭಾಗದ ಕೆಎಸ್ಆರ್ಟಿಸಿ ಡಿವಿಷನಲ್ ಮ್ಯಾನೇಜರ್ ವೆಂಕಟೇಶ್ವರ ತಿಳಿಸಿದ್ದಾರೆ.
ಹಾಗೇ, ಚಿಕ್ಕಬಳ್ಳಾಪುರ - ಪುಟ್ಟಪರ್ತಿ, ಚಿಕ್ಕಬಳ್ಳಾಪುರ - ತಿರುಪತಿ ನಡುವಣ ಬಸ್ ಸಂಚಾರ ರದ್ದಾಗಿದೆ ಎಂದು ಚಿಕ್ಕಬಳ್ಳಾಪುರ ವಿಭಾಗದ ಕೆಎಸ್ಆರ್ಟಿಸಿ ಡಿವಿಷನಲ್ ಮ್ಯಾನೇಜರ್ ಟಿ ಸಿ ಪ್ರಸಾದ್ ಒನ್ ಇಂಡಿಯಾಗೆ ತಿಳಿಸಿದ್ದಾರೆ.
ಇದರಿಂದ ರಾಜ್ಯದಿಂದ ಪುಣ್ಯಕ್ಷೇತ್ರ ತಿರುಪತಿಗೆ ಪ್ರಯಾಣಿಸುವ ಸಾವಿರಾರು ಭಕ್ತಾದಿಗಳಿಗೆ ತೀವ್ರ ತೊಂದರೆಯಾಗಿದೆ.
ಆಂಧ್ರ ಇಬ್ಬಾಗ: ಪ್ರಮುಖ ಘಟನೆಗಳು
> ಮುಂದಿನ ಹತ್ತು ವರ್ಷಕ್ಕೆ ಹೈದರಾಬಾದ್ ನಗರವನ್ನು ಜಂಟಿ ರಾಜಧಾನಿಯನ್ನಾಗಿ ಮಾಡಲು TRS ಮುಖ್ಯಸ್ಥ ಚಂದ್ರಶೇಖರ್ ರಾವ್ ಅಭ್ಯಂತರವಿಲ್ಲ ಎಂದಿದ್ದಾರೆ.
> ಲೋಕಸಭಾ ಚುನಾವಣೆಗೆ ಮುನ್ನ ಆಂಧ್ರವನ್ನು ವಿಭಜಿಸಿದ್ದಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
> ಆಂಧ್ರ ಇಬ್ಬಾಗವಾದಂತೆ ಉತ್ತರಪ್ರದೇಶವನ್ನೂ ನಾಲ್ಕು ವಿಭಜನೆ ಮಾಡಿ ಹೊಸ ರಾಜ್ಯ ಘೋಷಿಸ ಬೇಕೆಂದು ಮಾಯಾವತಿ ಹೊಸ ಪ್ರಸ್ತಾಪ.
> ಗುಂಟೂರಿನ ಹಿರಿಯ ಕಾಂಗ್ರೆಸ್ ಮುಖಂಡ ರಾಯಪಟ್ಟಿ ಸಾಂಬಶಿವ ರಾವ್ ರಾಜೀನಾಮೆ ಇಂಗಿತ.
> ವಿಭಜನೆ ವಿರೋಧಿಸಿ ಗುಂಟೂರಿನಲ್ಲಿ ವಿದ್ಯಾರ್ಥಿಯೊಬ್ಬನಿಂದ ಅತ್ಮಹತ್ಯೆಗೆ ಯತ್ನ.
> ಆಂಧ್ರ ವಿಭಜನೆ ನನ್ನ ರಾಜಕೀಯ ಜೀವನದ ಅತ್ಯಂತ ನೋವಿನ ಘಟನೆ, ಕಿರಣ್ ಕುಮಾರ್ ರೆಡ್ಡಿ, ಆಂಧ್ರ ಸಿಎಂ.
> ಆಂಧ್ರ ಕರಾವಳಿ ಮತ್ತು ರಾಯಲ್ ಸೀಮಾ ಪ್ರಾಂತ್ಯದಲ್ಲಿ ಬಂದಿಗೆ ಉತ್ತಮ ಬೆಂಬಲ.












Click it and Unblock the Notifications