ಮತ್ತೆ ಓಡಲಿದೆ ಯಶವಂತಪುರ-ತುಮಕೂರು ರೈಲು

ಯಶವಂತಪುರ - ತುಮಕೂರು ನಡುವಿನ ಪ್ರತಿನಿತ್ಯದ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಆ.3ರಂದು ಬೆಳಗ್ಗೆ 10.30ಕ್ಕೆ ತಮಕೂರು ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ.
ಬೆಂಗಳೂರು ಅರಸೀಕೆರೆ ಬ್ರಾಡ್ ಗೇಜ್ ಆಗಿ ಪರಿವರ್ತನೆ ಆದ ನಂತರ ಯಶವಂತಪುರ - ತುಮಕೂರು ಪ್ರತಿನಿತ್ಯದ ರೈಲು ಸಂಚಾರ ರದ್ದುಗೊಂಡಿತ್ತು. ಬರೋಬ್ಬರಿ 22 ವರ್ಷಗಳ ನಂತರ ಈ ರೈಲು ಓಡಾಟ ಮತ್ತೆ ಪ್ರಾರಂಭವಾಗಲಿದೆ.
ರೈಲ್ವೆ ಸಚಿವರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರವಹಿಸಕೊಂಡ ತಕ್ಷಣ ಈ ರೈಲು ಯೋಜನೆ ಪುನಃ ಪ್ರಾರಂಭಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿರುವ ಇಲಾಖೆ ಆ.3ರಿಂದ ಪ್ರತಿನಿತ್ಯ ಸಂಚಾರ ಪ್ರಾರಂಭಿಸಲಿದೆ.
ವೇಳಾಪಟ್ಟಿ : ಈ ರೈಲು ಬೆಳಗ್ಗೆ 5.45ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಟು, 6.45ಕ್ಕೆ ತುಮಕೂರು ತಲುಪಲಿದೆ. ಬೆಳಗ್ಗೆ 8.15ಕ್ಕೆ ತುಮಕೂರಿನಿಂದ ಹೊರಟು 9.15ಕ್ಕೆ ಯಶವಂತಪುರಕ್ಕೆ ತಲುಪಲಿದೆ.
25 ಸಾವಿರ ಪ್ರಯಾಣಿಕರು : ಬೆಂಗಳೂರು ಮತ್ತು ತುಮಕೂರು ನಡುವೆ ಪ್ರತಿನಿತ್ಯ 25 ಸಾವಿರ ಜನರು ಪ್ರಯಾಣಿಸುತ್ತಾರೆ ಎಂದು ಅಂದಾಜಿಸಲಾಗಿದೆ. 8 ರಿಂದ 10 ಸಾವಿರ ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಾರೆ.
ಬೆಂಗಳೂರು ಮತ್ತು ತುಮಕೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ತುಮಕೂರು ಮೂಲಕ ಹಾಗು ಹೋಗುವ ಇತರ ರೈಲುಗಳನ್ನು ಪ್ರಯಾಣಿಕರು ಅವಲಂಭಿಸಿದ್ದರು. ತುಮಕೂರು - ಬೆಂಗಳೂರು ರೈಲು ಪುನಃ ಆರಂಭಿಸುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರು.












Click it and Unblock the Notifications