ಒಬ್ಬರನ್ನು ಕೊಂದು, ಕಾಡಿಗೆ ಮರಳಿದ ಒಂಟಿ ಸಲಗ

ಹಿರಿಯೂರು ತಾಲೂಕಿನ ದಿಂಡಾವರ ಗ್ರಾಮದ ಭೋವಿ ಕಾಲೋನಿಯ ನಿವಾಸಿಯಾದ ಕರಿಯಾಬೋವಿ(68) ಆನೆದಾಳಿಯಿಂದಾಗಿ ಮೃತಪಟ್ಟಿದ್ದರು. ದಿಂಡಾವರದ ಕೆರೆಯ ಬಳಿ ಮಂಗಳವಾರ ಬೆಳಗ್ಗೆ ಶೌಚಕ್ಕೆ ತೆರಳಿದ್ದಾಗ ಆನೆ, ಇವರ ಮೇಲೆ ದಾಳಿ ಮಾಡಿ, ಕೊಂದು ಹಾಕಿತ್ತು.
ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯರದಕಟ್ಟೆ ಗ್ರಾಮದವರಾದ ಕರಿಯಾಬೋವಿ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಅವರು ಕಿವುಡರಾಗಿದ್ದರಿಂದ ಆನೆಬಂದ ಸದ್ದು ಕೇಳದೆ, ಅದರ ದಾಳಿಗೆ ತುತ್ತಾಗಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಐದು ಲಕ್ಷ ಪರಿಹಾರ : ಮೃತ ಕರಿಯಾಬೋವಿ ಅವರ ಕುಟುಂಬಕ್ಕೆ ವಲಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಐದು ಸಾವಿರ ರೂ.ಗಳ ಪರಿಹಾರ ನೀಡಿದ್ದಾರೆ. ತನಿಖೆ ನಂತರ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.
ದಿಂಡಾವರ ಕೆರೆಯಲ್ಲಿ ಮಂಗಳವಾರ ರಾತ್ರಿಯಿಂದ ಕಾರ್ಯಚರಣೆ ನಡೆಸಿದ ದಸರಾ ಗಜಪಡೆಗಳು ಒಂಟಿ ಸಲಗವನ್ನು, ಚಿಕ್ಕನಾಯಕನಹಳ್ಳಿ ಬಳಿಯ ಬುಕ್ಕಾಪಟ್ಟಣ ಅರಣ್ಯಕ್ಕೆ ಅಟ್ಟಿದ್ದಾರೆ. ಇದರಿಂದ ಗ್ರಾಮದ ಜನರಲ್ಲಿ ಉಂಟಾಗಿದ್ದ ಆತಂಕ ದೂರಾಗಿದೆ.
ಆಪರೇಷನ್ ಗಜಪಡೆ : ಮಂಗಳವಾರ ಸಂಜೆ ಮೈಸೂರಿನ ಅಭಿಮನ್ಯು ನೇತೃತ್ವದ ನಾಲ್ಕು ದಸರಾ ಆನೆಗಳ ತಂಡ ಹಿರಿಯೂರಿಗೆ ಆಗಮಿಸಿ ಒಂಟಿ ಸಲಗವನ್ನು ಕಾಡಿಗೆ ಅಟ್ಟಿದವು. ಅಭಿಮನ್ಯು, ಹರ್ಷ, ಗಜೇಂದ್ರ ಹಾಗೂ ಶ್ರೀರಾಮ ಆನೆಗಳು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದವು.
ಎಲ್ಲಿಂದ ಬಂತು : ಒಂಟಿ ಸಲಗ ಸತತವಾಗಿ ನಾಲ್ಕು ದಿನದಿಂದ ಹಿರಿಯೂರಿನ ಬಳಿ ಓಡಾಡಿಕೊಂಡಿತ್ತು. ತುಮಕೂರು, ಗುಬ್ಬಿ ತಾಲೂಕಿನ ಮಂಚಲದೊರೆ, ಬುಕ್ಕಾಪಟ್ಟಣ ಅರಣ್ಯದ ಮೂಲಕ ಸಲಗ, ಹಿರಿಯೂರಿಗೆ ಆಗಮಿಸಿ, ದಿಂಡಾವರದಲ್ಲಿ ವಾಸ್ತವ್ಯ ಹೂಡಿತ್ತು.












Click it and Unblock the Notifications