ತೆಲಂಗಾಣ ರಾಜ್ಯ ರಚನೆಗೆ ಯುಪಿಎ ಒಪ್ಪಿಗೆ
ನವದೆಹಲಿ, ಜು.30: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಯುಪಿಎ ಸಮನ್ವಯ ಸಮಿತಿ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಆಂಧ್ರ ಪ್ರದೇಶದ ವಿಭಜನೆಗೆ ಅಂಕಿತ ಹಾಕಲಾಗಿದೆ. ಸಭೆಯಲ್ಲಿ ಕೇಂದ್ರ ಸಚಿವ ಸಂಪುಟದ ಸಚಿವರು ಭಾಗವಹಿಸಿದ್ದರು. ಭಾರತದ 29ನೇ ರಾಜ್ಯವಾಗಿ ತೆಲಂಗಾಣ ಅಧಿಕೃತವಾಗಿ ಘೋಷಣೆಯಾಗಿದೆ
ಸಮನ್ವಯ ಸಮಿತಿ ಸಭೆ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯ ಬಳಿಕೆ ಪ್ರತ್ಯೇಕ ರಾಜ್ಯ ರಚನೆ ಕುರಿತು ಅಧಿಕೃತ ಘೋಷಣೆ ಹೊರಬೀಳಲಿದೆ. ಈ ನಡುವೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಹಾಗೂ ಕೆಲವು ಕ್ಯಾಬಿನೆಟ್ ಸಚಿವರು ದೆಹಲಿಗೆ ದೌಡಾಯಿಸಿದ್ದಾರೆ.
ಸಮಯ 7.30: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾರ್ಯಕಾರಿ ಸಭೆ ಮುಕ್ತಾಯವಾಗಿದ್ದು ಉಭಯ ರಾಜ್ಯಗಳಿಗೆ 10 ವರ್ಷಗಳ ಕಾಲ ಹೈದರಾಬಾದ್ ಯಾಗಲಿದೆ.
* ಮೂಲ ಸೌಕರ್ಯ, ನದಿ ನೀರು ವಿದ್ಯುತ್ ಹಂಚಿಕೆಗೆ ಪ್ರತ್ಯೇಕ ಸಮಿತಿ ರಚನೆ,
* ಪ್ರತ್ಯೇಕ ರಾಜ್ಯಕ್ಕಾಗಿ ವಿಧಾನಸಭೆಯಲ್ಲಿ ಮನವಿ, ಕೇಂದ್ರ ಸರ್ಕಾರಕ್ಕೆ CWC ಮನವಿ
* ಎಲ್ಲೆಡೆ ಒಪ್ಪಿಗೆ ಸಿಕ್ಕ ಮೇಲೆ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಕೆ ನಂತರ ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ
* ತೆಲಂಗಾಣಕ್ಕೆ 10 ಜಿಲ್ಲೆಗಳು ಹಾಗೂ ಸೀಮಾಂಧ್ರಕ್ಕೆ 13 ಜಿಲ್ಲೆಗಳು
* ಹೈದರಾಬಾದಿನ ಆದಾಯ ಸಮನಾಗಿ ಹಂಚಿಕೆ, ಉಭಯ ರಾಜ್ಯಕ್ಕೂ ಇದು ಶಕ್ತಿ ಕೇಂದ್ರ
ತೆಲಂಗಾಣ ರಾಜ್ಯ 10 ಜಿಲ್ಲೆಗಳನ್ನು ಹೊಂದಿದ್ದು ಹೈದರಾಬಾದ್ ರಾಜಧಾನಿಯಾಗಬೇಕಿದೆ. ಇದಕ್ಕೆ ಈಗ ರಾಯಲ ಸೀಮೆಯ ಅನಂತಪುರ, ಕರ್ನೂಲು ಜಿಲ್ಲೆಗಳು ಸೇರ್ಪಡೆಗೊಳಿಸಲಾಗಿದೆ. ವೈಎಸ್ಸಾರ್ ಪಕ್ಷದ ಹಿಡಿತವಿರುವ ಈ ಪ್ರದೇಶಗಳನ್ನು ತೆಲಂಗಾಣ ಭಾಗಕ್ಕೆ ಸೇರಿ ಹಿಡಿತ ಸಾಧಿಸಲು ಕಾಂಗ್ರೆಸ್ ಚಿಂತಿಸಿದೆ.

ಕೇಂದ್ರ ಸರ್ಕಾರ ಹೈದರಾಬಾದನ್ನು ಯಾವ ರಾಜ್ಯಕ್ಕೂ ನೀಡದೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲು ಚಿಂತಿಸಿದೆ. ಐದು ವರ್ಷಗಳ ನಂತರ ಪರಿಸ್ಥಿತಿ ಅವಲೋಕಿಸಿ ಯಾರಿಗೆ ನೀಡಬೇಕು ಎಂಬುದನ್ನು ಇತ್ಯರ್ಥಪಡಿಸಲಿದೆ. ಅಲ್ಲಿಯವರೆಗೂ ಹೈದರಾಬಾದ್ ನಗರವನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿಸಲು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಯಾವುದೇ ನಗರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದರೆ ಅಲ್ಲಿ ಯಾವುದೇ ಸರ್ಕಾರದ ಹಿಡಿತವಿರುವುದಿಲ್ಲ. ಉಸ್ತುವಾರಿಗಾಗಿ ಲೆಫ್ಟಿನೆಂಟ್ ಗವರ್ನರ್ ಜನರಲ್ ಅವರನ್ನು ನೇಮಕ ಮಾಡಲಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಆಂಧ್ರಪ್ರದೇಶ ವಿಭಜನೆ ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಶುಕ್ರವಾರದಂದು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ ವೇಳೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಎಲ್ಲೆಡೆ ಕೇಳಿಬರುತ್ತಿದೆ.












Click it and Unblock the Notifications