ನಿತ್ಯೋತ್ಸವದಿಂದ ವಂಚಿತವಾದ ಎರಡು ಜಿಲ್ಲೆಗಳು
ಬೆಂಗಳೂರು, ಜು.29 : ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಜನರಿಗೆ ನಿರಾಸೆ ಉಂಟು ಮಾಡಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮವಾದ ಮಳೆ ಸುರಿದಿದೆ. ಆದರೆ, ಯಾದಗಿರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ.
ರಾಜ್ಯದಲ್ಲಿ ಜೂನ್ 1 ರಿಂದ ಜುಲೈ 27ರವರೆಗೆ ವಾಡಿಕೆಯಂತೆ 437.7 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ಬಾರಿ 558.2 ಮಿ.ಮೀ ಮಳೆ ಸುರಿದಿದೆ. ವಾಡಿಕೆಗೆ ಹೋಲಿಸಿದರೆ ಈ ಬಾರಿ ಶೇ 28ರಷ್ಟು ಹೆಚ್ಚಿನ ಮಳೆ ಬಿದ್ದಿದೆ.
30 ಜಿಲ್ಲೆಗಳ ಪೈಕಿ ಮಲೆನಾಡು ಭಾಗದ ಶಿವಮೊಗ್ಗದಲ್ಲಿ ಶೇ 81 ರಷ್ಟು ಹೆಚ್ಚಿನ ಮಳೆ ಸುರಿದಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ 897.8 ಮಿ.ಮೀ. ಮಳೆ ಸುರಿಯಬೇಕಾಗಿತ್ತು. ಆದರೆ, ಈ ಬಾರಿ 1627 ಮಿ.ಮೀ. ಮಳೆ ಬಿದ್ದಿದೆ.
ಹವಾಮಾನ ಇಲಾಖೆ ನಿರ್ದೇಶಕರಾದ ಪುಟ್ಟಣ್ಣ ಅವರು ರಾಜ್ಯದಲ್ಲಿ ಸುರಿದ ಮುಂಗಾರು ಮಳೆಯ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳ ಪ್ರವಾಹ ಪರಿಸ್ಥಿತಿಗೆ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಕಾರಣ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿನ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ಹವಾಮಾನ ಇಲಾಖೆ ವಿಭಜಿಸಿದೆ. ಕರಾವಳಿ ಭಾಗದಲ್ಲಿ 2400 ಮಿ.ಮೀ.ಮಳೆ ಸುರಿದಿದೆ. ವಾಡಿಕೆಯಂತೆ ವಾರ್ಷಿಕ 1896.2 ಮಿ.ಮೀ ಮಳೆ ಬೀಳಬೇಕಾಗಿತ್ತು.
ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ವಾಡಿಕೆಯಂತೆ 219.8 ಮಿ.ಮೀ ಮಳೆ ಬೀಳಬೇಕಿತ್ತು. ಈ ಬಾರಿ ಶೇ 14ರಷ್ಟು ಹೆಚ್ಚಿನ ಮಳೆ ಸುರಿದಿದೆ. ಬೀದರ್ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 55 ರಷ್ಟು ಮಳೆ ಸುರಿದಿದೆ.
ಕಡಿಮೆ ಮಳೆ : ಯಾದಗಿರಿ ಮತ್ತು ತುಮಕೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. ಯಾದಗಿರಿಯಲ್ಲಿ - 34ರಷ್ಟು ಮಳೆ ಕಡಿಮೆಯಾಗಿದ್ದರೆ, ತುಮಕೂರಿನಲ್ಲಿ -21ರಷ್ಟು ಮಳೆ ಕಡಿಮೆ ಬಿದ್ದಿದೆ.
ಬೆಂಗಳೂರು ಗ್ರಾಮಾಂತರ ಮತ್ತು ನಗರದ ಪ್ರದೇಶದಲ್ಲಿಯೂ 11ರಿಂದ 12ರಷ್ಟು ಮಳೆ ಸುರಿದಿದೆ. ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಪುಟ್ಟಣ್ಣ ಹೇಳಿದ್ದಾರೆ.












Click it and Unblock the Notifications