ಬಿಜೆಪಿ ಜತೆ ಆಗಿಬರಲಿಲ್ಲ; ಅದ್ಕೇ ಎಸ್ಪಿ ಜತೆ ಬಿಎಸ್ ವೈ
ಬೆಂಗಳೂರು, ಜುಲೈ29: ಬಿಜೆಪಿ ಆಗಿಬರಲಿಲ್ಲಾಂದ್ರೆ ಎಸ್ ಪಿ ಆದರೂ ಆದೀತು. ಒಟ್ಟಿನಲ್ಲಿ ಯಾವುದೋ ಒಂದು ಪೀಪಿ ಇರಬೇಕು- ಇದು ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು ರಣತಂತ್ರ ರೂಪಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೊಸೆಯುತ್ತಿರುವ ತಾಜಾ ತಂತ್ರ.
ತಮ್ಮದೇ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿಗೆ ಮರಳುವ ವಿಚಾರಕ್ಕೆ ಬಹುತೇಕ ಎಳ್ಳುನೀರು ಬಿಟ್ಟಿರುವ ಕೆಜೆಪಿ ಅಧಿನಾಯಕ ಯಡಿಯೂರಪ್ಪ ಈಗ ತೃತೀಯ ರಂಗದತ್ತ ಮುಖ ಮಾಡಿರುವುದು ಸ್ಪಷ್ಟವಾಗುತ್ತಿದೆ.
ಅಂದಹಾಗೆ ಇಂದು ಚಿತ್ರದುರ್ಗದಲ್ಲಿ ಸಮಾಜವಾದಿ ಪಕ್ಷದ ಬೃಹತ್ ಸಮಾವೇಶ ನಡೆಯಲಿದ್ದು ಅದರಲ್ಲಿ ಪಾಲ್ಗೊಳ್ಳಲು ಅಪ್ಪ-ಮಗ ಮುಲಾಯಂ ಮತ್ತು ಅಖಿಲೇಶ್ ನಿನ್ನೆ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಯಡಿಯೂರಪ್ಪ -ಮುಲಾಯಂ ಏಕಾಂತದಲ್ಲಿ ಮಾತುಕತೆ
ತನ್ನಿಮಿತ್ತ, ರಾಜಧಾನಿಯಲ್ಲಿ ಯಡಿಯೂರಪ್ಪ ಅವರು ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಜತೆ ಭಾನುವಾರಸುಮಾರು ಹೊತ್ತು ಏಕಾಂತದಲ್ಲಿ ಮಾತುಕತೆ ನಡೆಸಿದ್ದಾರೆ. ಎಸ್ ಪಿ ನಾಯಕ ಮುಲಾಯಂ ಸಿಂಗ್, ಕೆಜೆಪಿ ನಾಯಕ ಯಡಿಯೂರಪ್ಪ ಭೇಟಿಯಾದರಂತೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಗುಸುಗುಸು ಮಾತು-ಕಥೆಗೆ ನೀರೆರೆದಿದೆ.

ಕೆಜೆಪಿ ಮತ್ತು ಸಮಾಜವಾದಿ ಪಕ್ಷದ ಮೈತ್ರಿ ಏರ್ಪಟ್ಟರೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೆಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಏರ್ಪಟ್ಟರೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಇಬ್ಬರೂ ಮುಖಂಡರು ಮಾತಿಕತೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ಸಿಗೆ ಪ್ರಬಲ ಪೈಪೋಟಿ
ದೇಶದಲ್ಲಿ ತೃತೀಯ ರಂಗ ಬಲಪಡಿಸಲು ಕರ್ನಾಟಕದಲ್ಲಿ ಕೆಜೆಪಿ ಮತ್ತು ಎಸ್ ಪಿ ಒಗ್ಗೂಡಿದರೆ ಸರಿಯಾದ ರಾಜಕೀಯ ನಡೆಯಾಗಲಿದೆ ಎಂಬ ಅಭಿಪ್ರಾಯವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ಯೋಗೀಶ್ವರ್ ಮಧ್ಯಸ್ಥಿಕೆ:
ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಬಯಸುವ ಕ್ಷೇತ್ರಗಳ ಬಗ್ಗೆ ಯೋಗೀಶ್ವರ್ ಮಾಹಿತಿ ನೀಡಲಿದ್ದಾರೆ. ಆ ನಂತರ ಸೀಟು ಹೊಂದಾಣಿಕೆ ಕುರಿತು ಮಾತನಾಡೋಣ ಎಂದು ಮುಲಾಯಂ ಭರವಸೆಯ ಮಾತುಗಳನ್ನಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. (ಕೃಪೆ- ವಿಜಯವಾಣಿ)












Click it and Unblock the Notifications