ಐಟಿ ನೇಮಕಾತಿ ಶೇ 60 ರಷ್ಟು ಕುಸಿತ

ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆಗಳು ಕೇವಲ 3,400 ಹೊಸ ನೇಮಕಾತಿ ಮಾಡಿಕೊಂಡಿದೆ. ಒಟ್ಟಾರೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಶೇ 60 ರಷ್ಟು ಕುಸಿತ ಕಂಡಿದೆ.
2012ರಲ್ಲಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸುಮಾರು 8,700 ಹೊಸ ನೇಮಕಾತಿ ಸಾಧಿಸಲಾಗಿತ್ತು. ಆದರೆ, ಈ ಬಾರಿ ಅರ್ಧಕ್ಕಿಂತ ಕಡಿಮೆ ನೇಮಕಾತಿ ನಡೆದಿದೆ.
ಜೂನ್ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ 1,390 ಉದ್ಯೋಗಿಗಳನ್ನು ಸೇರಿಸಿಕೊಂಡಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಯಲ್ಲಿ 4,962 ಹೊಸ ನೇಮಕಾತಿ ಸಾಧಿಸಲಾಗಿತ್ತು.
ಇನ್ಫೋಸಿಸ್ ಪ್ರಸಕ್ತ ವರ್ಷ ಹೊಸ ನೇಮಕಾತಿಗೆ ಬ್ರೇಕ್ ಹಾಕಿರುವುದು ಎಲ್ಲರಿಗೂ ತಿಳಿದೇ ಇದೆ. ಆದರೂ ಜೂನ್ ತ್ರೈಮಾಸಿಕದಲ್ಲಿ 575 ಹೊಸ ನೇಮಕಾತಿ ನಡೆಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,157 ನಿವ್ವಳ ಹೆಚ್ಚುವರಿ ನೇಮಕಾತಿ ನಡೆದಿತ್ತು.
ಜೂನ್ ತ್ರೈಮಾಸಿಕದಲ್ಲಿ ವಿಪ್ರೋ ಸಂಸ್ಥೆ ಅತಿ ಹೆಚ್ಚು 1,469 ಜನರನ್ನು ತನ್ನ ಐಟಿ ಸರ್ವೀಸ್ ವಿಭಾಗಕ್ಕೆ ಆಯ್ಕೆ ಮಾಡಿಕೊಂಡಿದೆ. ಆದರೆ, ಕಳೆದ ತ್ರೈಮಾಸಿಕದಲ್ಲಿ 2,600 ಅಭ್ಯರ್ಥಿಗಳನ್ನು ಕಂಪನಿಗೆ ಸೇರಿಸಿಕೊಂಡಿತ್ತು.
ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ಮೂರು ಕಂಪನಿಗಳು ಒಟ್ಟಾರೆ 16,500 ಅಭ್ಯರ್ಥಿಗಳನ್ನು ಉದ್ಯೋಗಿಗಳಾಗಿ ನೇಮಿಸಿಕೊಂಡಿತ್ತು.
ಉತ್ತಮ ಕಾರ್ಯನಿರ್ವಹಣೆ ತೋರದ 'under-performers' ಗಳನ್ನು ಕಂಪನಿಯಿಂದ ಹೊರಕ್ಕೆ ಕಳಿಸಲು, ಜೊತೆಗೆ ತ್ರೈಮಾಸಿಕದಿಂದ ತ್ರೈಮಾಸಿಕದಲ್ಲೆ ಸಾಮಾನ್ಯವಾಗಿ ಉದ್ಯೋಗಿಗಳ ಕಡಿತಗೊಳಿಸಲು ಇನ್ಫೋಸಿಸ್ ಮುಂದಾಗಿತ್ತು. 2013ರಲ್ಲಿ ಟೆಕ್ಕಿಗಳ ನೇಮಕಾತಿಗೆ ನಿರ್ಬಂಧ ಹೇರಲಾಗಿದೆ ಎಂದು ಸಂಸ್ಥೆಯ ಸಹ ಸ್ಥಾಪಕ ಎಸ್ ಗೋಪಾಲಕೃಷ್ಣನ್ ಹೇಳಿದ್ದರು.
ಉದ್ಯೋಗಿಗಳ ನೇಮಕಾತಿ ವಿಷಯ ಈಗ ಎಲ್ಲಾ ಪ್ರಮುಖ ಐಟಿ ಸಂಸ್ಥೆಗಳಿಗೆ ತಲೆನೋವಾಗಿದೆ. ಇತ್ತೀಚೆಗೆ ಎಚ್ ಸಿಎಲ್ ಸಂಸ್ಥೆ ವಿರುದ್ಧ ಫ್ರೆಶರ್ಸ್ ನೇಮಕಾತಿ ಲೆಟರ್ ಸಿಕ್ಕಿಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಅನೇಕ ಕಂಪನಿಗಳಲ್ಲಿ ಬೆಂಚ್ ಗಳಲ್ಲಿ ಶೇ 30ರಷ್ಟು ಉದ್ಯೋಗಿಗಳು ಸುಮ್ಮನೆ ಕುಳಿತುಕೊಳ್ಳುವಂತಾಗಿದೆ.












Click it and Unblock the Notifications