ಎಂಟು ತಿಂಗಳಿನಲ್ಲಿ ಹಳ್ಳಿ ಹಳ್ಳಿಗೂ ಬರುತ್ತೆ ಎಟಿಎಂ

ನವದೆಹಲಿಯಲ್ಲಿ ಮಾತನಾಡಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಎಲ್ಲಾ ಬ್ಯಾಂಕ್ ಗಳಿಗೂ, ಶಾಖೆಗೊಂದು ಎಟಿಎಂ ಸ್ಥಾಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಬ್ಯಾಂಕ್ ಗಳಿಗೂ ಎಟಿಎಂ ವ್ಯವಸ್ಥೆ ಕಲ್ಪಿಸಲು 2014ರ ಮಾರ್ಚ್ ತಿಂಗಳ ಗಡುವು ನೀಡಲಾಗಿದೆ. ದೇಶಾದ್ಯಂತ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ 8 ಸಾವಿರ ಹೊಸ ಶಾಖೆಗಳನ್ನು ಆರಂಭಿಸಲು ಸೂಚಿಸಲಾಗಿದೆ. ಈ ಬಗ್ಗೆ ಆದೇಶಗಳನ್ನು ಬ್ಯಾಂಕ್ ಗಳಿಗೆ ಈಗಾಗಲೇ ತಲುಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದರಿಂದಾಗಿ ಇನ್ನು ಮುಂದೆ ಎಟಿಎಂಗೋಸ್ಕರ ಪಟ್ಟಣಕ್ಕೆ ಬರುವ ಅಗತ್ಯವಿಲ್ಲ. ಬ್ಯಾಂಕಿಂಗ್ ಸೌಲಭ್ಯವನ್ನು ಗ್ರಾಮೀಣ ಪ್ರದೇಶಗಳಿಗೂ ತಲುಪಿಸುವ ಉದ್ದೇಶದಿಂದ ಇಂತಹ ಮಹತ್ವದ ಕಾರ್ಯಕ್ಕೆ ಕೇಂದ್ರ ಹಣಕಾಸು ಇಲಾಖೆ ಮುಂದಾಗಿದೆ.
ಏಕೆ ಅಗತ್ಯ : ಸದ್ಯ ಸರ್ಕಾರದ ವಿವಿಧ ಸಹಾಯಧನಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರು ಸಹಾಯಧನದ ಹಣವನ್ನು ಪಡೆಯಲು ನಗರಕ್ಕೆ ಆಗಮಿಸಬೇಕಾಗಿತ್ತು. ಇದನ್ನು ತಪ್ಪಿಸಲು ಈ ಪ್ರತಿ ಶಾಖೆಗೊಂದು ಎಟಿಎಂ ಸ್ಥಾಪಿಸಲು ನಿರ್ದೇಶನ ನೀಡಲಾಗಿದೆ.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರತಿ ಶಾಖೆಗೊಂದು ಎಟಿಎಂ ಸ್ಥಾಪನೆಯಾಗುವುದರಿಂದ ನಗರ ಪ್ರದೇಶಗಳಲ್ಲಿಯೂ ಹೆಚ್ಚಿನ ಎಟಿಎಂ ಸೆಂಟರ್ ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಗಳು ಕ್ರಾಂತಿ ಮಾಡಿದ್ದು, ಮುಂದೆ ಬ್ಯಾಂಕಿಂಗ್ ಕ್ರಾಂತಿ ಆಗುವ ಸಾಧ್ಯತೆ ಇದೆ.
ದೇಶದಲ್ಲಿ 1 ಲಕ್ಷ ಸಾರ್ವಜನಿಕ ವಲಯದ ಬ್ಯಾಂಕ್ ಶಾಖೆಗಳಿವೆ. ದೇಶದ ಮೂಲೆ ಮೂಲೆಯಲ್ಲೂ ಎಟಿಎಂ ಇರಬೇಕು ಎಂಬುದೇ ಸರಕಾರದ ಅಪೇಕ್ಷೆ ಆದ್ದರಿಂದ ಇಂತಹ ಯೋಜನೆ ಕೈಗೊಳ್ಳಲಾಗಿದೆ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆ ಎಟಿಎಂಗಾಗಿ ನೀವು ನಗರಕ್ಕೆ ಬರುವ ಕಿರಿಕಿರಿ ತಪ್ಪುವುದಂತೂ ಸತ್ಯ.












Click it and Unblock the Notifications