ಮುಗಿಯದ ಆಧಾರ್ ನೋಂದಣಿ ರಗಳೆ: ಬೇಸತ್ತ ಜನ
ಉಡುಪಿ, ಜುಲೈ24: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಧಾರ್ ಗುರುತಿನ ಚೀಟಿ ರಗಳೆ ಮುಗಿದಿಲ್ಲ. ಕರ್ನಾಟಕ ಸೇರಿದಂತೆ ಆಧಾರ್ ನೋಂದಣಿ ಎಲ್ಲೂ ಸುಸೂತ್ರವಾಗಿ ನಡೆಯುತ್ತಿಲ್ಲ. ಇದರಿಂದ ಜನ ಬೇಸತ್ತಿದ್ದಾರೆ.
ಇತ್ತೀಚೆಗೆ ತುಮಕೂರು, ಬೆಂಗಳೂರಿಗೆ ಭೇಟಿ ನೀಡಿದ್ದ Unique Identification Authority of India (UIDAI) ಅಧ್ಯಕ್ಷ ನಂದನ್ ನಿಲೇಕಣಿ ಅವರೇನೂ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕರ್ನಾಟಕದಲ್ಲಿ ಆಧಾರ್ ನೋಂದಣಿ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆದರೆ ಆಧಾರ್ ಬಗ್ಗೆ ಜನ ನಿಜಕ್ಕೂ ಬೇಸರಗೊಂಡಿದ್ದಾರೆ.
ಇದು ಒಂದು ಉಡುಪಿಯ ಕಥೆಯಲ್ಲ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದೇ ಕಥೆಯಾಗಿದೆ. ಸರಕಾರ ಸಮರೋಪಾದಿಯಲ್ಲಿ ಆಧಾರ್ ನೋಂದಣಿ ಕಾರ್ಯವನ್ನು ಮುಗಿಸುವುದು ಒಳಿತು.

ಅಂಚೆ ಕಚೇರಿ ಉದಾಸೀನತೆ
ಜಿಲ್ಲಾ ಮಟ್ಟದಲ್ಲಂತೂ ಆಧಾರ್ ನೋಂದಣಿ ಮಾಡಿಸುವುದು ದೊಡ್ಡ ರಗಳೆಯಾಗಿದೆ. ಉಡುಪಿಯಲ್ಲಿ ಜನ ಮುಗಿಬಿದ್ದು ನೋಂದಣಿ ಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರೆ ನೋಂದಣಿಯ ಹೊಣೆಹೊತ್ತ ಅಂಚೆ ಕಚೇರಿ ಉದಾಸೀನತೆ ತೋರುತ್ತಿದೆ.
ಉಡುಪಿಯ ಪ್ರಧಾನ ಅಂಚೆ ಕಚೇರಿ ಜೂನ್ 22ರಿಂದ ಆಯಾ ವಾರ್ಡುಗಳಲ್ಲಿ ಅರ್ಜಿ ವಿತರಿಸಿ, ಟೋಕನ್ ನೀಡುತ್ತಿದೆ. ಆದರೆ ಪ್ರತಿ ದಿನ ಕೇವಲ 50 ಅರ್ಜಿಗಳನ್ನಷ್ಟೇ ವಿತರಿಸಲಾರಂಭಿಸಿದೆ. ಇನ್ನು ನೋಂದಣಿ ಕೇಂದ್ರಗಳು ಜಿಲ್ಲೆಯಲ್ಲಿ ಕೇವಲ ಮೂರು ಕಡೆ ಇವೆ. ಉಡುಪಿ ಬಿಟ್ಟರೆ ಕುಂದಾಪುರ ಮತ್ತು ಬೈಂದೂರಿನಲ್ಲಿ ಮಾತ್ರ ಇದೆ.

ಜಿಲ್ಲೆಯಲ್ಲಿ 6 ಲಕ್ಷ ಮಂದಿ ಇದ್ದಾರೆ:
ತಮಾಷೆಯೆಂದರೆ ಜಿಲ್ಲೆಯಲ್ಲಿ ಇತ್ತೀಚೆಗೆ ರೇಷನ್ ಕಾರ್ಡ್ ನೋಂದಣಿ/ವಿತರಣೆಯೂ ಹೀಗೇ ನಡೆದಿತ್ತು. ಜಿಲ್ಲಾಡಳಿತದಿಂದ ಅದರಿಂದಲೂ ಪಾಠ ಕಲಿತಿಲ್ಲ. ದಿನಕ್ಕೆ 50 ಅರ್ಜಿಯಂತೆ ನೋಂದಣಿ ಮಾಡಿಸಿಕೊಳ್ಳುತ್ತಾ ಹೋದರೆ ಜಿಲ್ಲೆಯಲ್ಲಿ 6 ಲಕ್ಷ ಮಂದಿ ಇದ್ದಾರೆ. ಅವರಿಗೆಲ್ಲ ಆಧಾರ್ ಕಾರ್ಡು ಕೊಡುವುದಿರಲಿ, ಇವರು ನೋಂದಣಿ ಮಾಡಿಸಿಕೊಳ್ಳುವುದು ಯಾವಾಗ ಎಂದು ಜನ ಗರಂ ಆಗಿದ್ದಾರೆ.

ಜನರ ಕಷ್ಟ ಅಧಿಕಾರಿಗಳ ಕಿವಿ/ಕಣ್ಣಿಗೆ ಬಿದ್ದಿಲ್ಲ:
ಬೆಳಗ್ಗೆ 7 ಗಂಟೆಗೆ ಬಂದು ಕ್ಯೂ ನಿಂತ್ಕೋತೀವಿ. ಇಡೀ ದಿನ ಅದಕ್ಕೇ ಮೀಸಲಿಟ್ಟಿದ್ದೇವೆ. ಆದರೂ ಕೆಲಸ ಆಗುತ್ತಿಲ್ಲ. ಇಡೀ ಮನೆ ಮಂದಿಯೆಲ್ಲ ರಸ್ತೆ ಬದಿಯಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಅದೂ ಮಳೆ ಸುರಿಯುತ್ತಿದ್ದರೂ. ಆದರೂ ನಮ್ಮ ಕಷ್ಟ ನೋಡೋರು ಯಾರು ಇಲ್ಲ ಎಂದು ಜನ ಹತಾಶೆ ವ್ಯಕ್ತಪಡಿಸಿದ್ದಾರೆ.

ಆಗಬೇಕಿರುವುದೇನು?:
ಹೆಚ್ಚು ಅರ್ಜಿಗಳು, ಹೆಚ್ಚು ನೋಂದಣಿ ಕೇಂದ್ರಗಳು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ಈ ಕಾರ್ಯದಲ್ಲಿ ತೊಡಗಿಸಬೇಕು ಎಂದು ಜಿಲ್ಲೆಯ ಜನರೇನೋ ಬಯಸುತ್ತಿದ್ದಾರೆ. ಆದರೆ ಅದು ಅಧಿಕಾರಿಗಳ ಕಿವಿಗೆ/ ಕಣ್ಣಿಗೆ ಬಿದ್ದಿಲ್ಲ.
ಮಾಹಿತಿ: kannadigaworld.com












Click it and Unblock the Notifications