ಅನ್ನಭಾಗ್ಯಕ್ಕಾಗಿ ಪೊಲೀಸರ ಅಕ್ಕಿಗೆ ಕುತ್ತು!

ಕಳೆದ ಒಂದೂವರೆ ದಶಕಗಳಿಂದಲೂ ಸುಗಮವಾಗಿ ನಡೆಯುತ್ತಾ ಬಂದಿದ್ದ ರಾಜ್ಯದ ಪೊಲೀಸರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸುವ ವ್ಯವಸ್ಥೆಯಲ್ಲಿ ಜುಲೈ ತಿಂಗಳಿನಿಂದ ಏರುಪೇರು ಉಂಟಾಗಿದ್ದು, ಯೋಜನೆ ಸ್ಥಗಿತಗೊಳ್ಳುವ ಮುನ್ಸೂಚನೆ ನೀಡಿದೆ.
ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಪೇದೆ, ಮುಖ್ಯ ಪೇದೆ ಸೇರಿದಂತೆ ಸುಮಾರು 75 ಸಾವಿರ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಉಚಿತ ಪಡಿತರ ವಿತರಿಸುತ್ತಿತ್ತು. ಆದರೆ, ಈ ಸೌಲಭ್ಯವು ಜುಲೈ ತಿಂಗಳಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ.
ಸರ್ಕಾರ ತನ್ನ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಸಂಗ್ರಹಿಸಲು ಆರಕ್ಷಕರಿಗೆ ನೀಡುತ್ತಿದ್ದ ಸೌಲಭ್ಯವನ್ನು ನಿಲ್ಲಿಸಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಪ್ರತಿ ತಿಂಗಳು 5ರಂದು ಪೊಲೀಸರಿಗೆ ತಲುಪುತ್ತಿದ್ದ ಅಕ್ಕಿ, ಗೋಧಿ ಈ ಬಾರಿ ತಲುಪಿಲ್ಲ.
ಆಗ ಕೊಟ್ಟಿದ್ದು ಇವರೆ : ಪೊಲೀಸರಿಗೆ ತಿಂಗಳಿಗೆ 15 ಕೆ.ಜಿ.ಅಕ್ಕಿ ಮತ್ತು 3 ಕೆ.ಜಿ.ಗೋಧಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಒದಗಿಸುವ ಯೋಜನೆ ಪ್ರಾರಂಭಿಸಿದ್ದು 1996ರಲ್ಲಿ. ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಈ ಯೋಜನೆ ಪ್ರಾರಂಭಿಸಿದ್ದರು.
ಅಂದು ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಯೋಜನೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ನೀಡಿದ್ದರು. ಆದರೆ, ಇಂದು ಮುಖ್ಯಮಂತ್ರಿಯಾದ ತಕ್ಷಣ ಅನ್ನಭಾಗ್ಯ ಯೋಜನೆ ಘೋಷಿಸಿ, ತಮ್ಮ ಹಳೆಯ ಯೋಜನೆಯನ್ನು ಸ್ಥಗಿತಗೊಳಿಸಲು ತಯಾರಿ ಆರಂಭಿಸಿದ್ದಾರೆ. (ಅನ್ನಭಾಗ್ಯ ಯೋಜನೆಗೆ ಸಿದ್ದರಾಮಯ್ಯ ಚಾಲನೆ)
ಪೊಲೀಸರಿಗೆ ವಿತರಿಸುವ ಪಡಿತರ ಯೋಜನೆಯನ್ನು ಸರ್ಕಾರ ತಡೆಹಿಡಿದಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಆರಕ್ಷಕರ ತುತ್ತಿನ ಚೀಲಕ್ಕೆ ಕೈ ಹಾಕಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.












Click it and Unblock the Notifications