ಲಂಚದ ಬಗ್ಗೆ ಸಖತ್ ಜೋಕ್ ಕಟ್ ಮಾಡಿದ ಬಿಜೆಪಿಯ ಜೇಟ್ಲಿ
ಚಂಡೀಗಢ, ಜುಲೈ22: ದೇಶದಲ್ಲಿ ತಾಂಡವವಾಡುತ್ತಿರುವ, ದೇಶದ ಆರ್ಥಿಕ ಪ್ರಗತಿಯನ್ನು ಹಳ್ಳ ಹಿಡಿಸಿರುವ ಭ್ರಷ್ಟಾಚಾರ ಎಂಬ ಪೆಡಂಭೂತದ ಬಗ್ಗೆ ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು ಸಖತ್ ಜೋಕ್ ಕಟ್ ಮಾಡಿದ್ದಾರೆ.
ಅಲ್ಲ ಈ ಭ್ರಷ್ಟಾಚಾರ ಎಂಬುದು ಯಾಪಾಟಿ ಸರ್ವಾಂತರ್ಯಾಮಿಯಾಗಿದೆ ಅಂದರೆ ಶಾಂತಿಪ್ರಿಯ ಬುದ್ಧನನ್ನು ಆತನ ಶಿಷ್ಯರು ಇಂದೇನಾದರೂ ಕೇಳಿದ್ದರೆ ಬುದ್ಧ ಮರುಮಾತಿಲ್ಲದೆ ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂಬಂತೆ 'ಲಂಚವಿಲ್ಲದ ಕಚೇರಿಯಿಂದ ಸಾಸಿವೆ ತಗೋಂಬಾಪ್ಪಾ ಎಂದು ಜೇಟ್ಲಿ ಜೀ ಸಾಹೇಬರಿಗೆ ಹೇಳುತ್ತಿದ್ದನಷ್ಟೇ!
ಏನಪ್ಪಾ ಅಂದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಹಗರಣಗಳು ಹಲವಾರು ನಡೆದಿವೆ. ಇವುಗಳಿಂದಾಗಿ ಭ್ರಷ್ಟಾಚಾರ ಸಣ್ಣ ಕೈಗಾರಿಕೆಯ ಮಟ್ಟಕ್ಕೆ ಬೆಳೆದಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಅಣಕವಾಡಿದ್ದಾರೆ. ಭಾನುವಾರ ಇಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮುಂದುವರಿದು ಮಾತನಾಡಿದ ಅವರು ಮುಂದಿನ ಲೋಕಸಭಾ ಚುನಾವಣೆ ನೈತಿಕತೆ ಮತ್ತು ಅನೈತಿಕತೆ ವಿರುದ್ಧದ ಸಮರವಾಗಲಿದೆ ಎಂದಿದ್ದಾರೆ.

ಲಂಚ- ಭಾರಿ ಕೈಗಾರಿಕೆಯಾಗಿ ಯಾವುದೋ ಕಾಲವಾಯ್ತು
ಒಂದು, ಅರುಣ್ ಜೇಟ್ಲಿಗೆ ತಡವಾಗಿ ಜ್ಞಾನೋದಯವಾದಂತಿದೆ. ಜೇಟ್ಲಿ ಸಾಹೇಬರೇ ಭ್ರಷ್ಟಾಚಾರ ಸಣ್ಣ ಕೈಗಾರಿಕೆಯ ಮಟ್ಟಕ್ಕೆ ಬೆಳೆದು ಯಾವುದೋ ಕಾಲವಾಗಿದೆ.
ಎರಡು, ಸಣ್ಣ ಕೈಗಾರಿಕೆಯ ಮಟ್ಟವನ್ನು ದಾಟಿ ಭಾರಿ ಪ್ರಮಾಣದ ಕೈಗಾರಿಕೆಯಾಗಿ ಯಾವುದೋ ಕಾಲವಾಗಿದೆ.

ನಿಮ್ಮದೇ ಬಿಜೆಪಿಯ ಕಡೆಗೂ ವಸಿ ನೋಡಿ
ಮೂರು, ಜಾತ್ಯಾತೀತ ದೇಶದಲ್ಲಿ ಜಾತ್ಯಾತೀತವಾಗಿಯೂ, ಪಕ್ಷಾತೀತವಾಗಿಯೂ ಯಾವುದೇ ಎಗ್ಗು ಸಿಗ್ಗು ಇಲ್ಲದೆ ನಡೆದಿದೆ.
ನಾಲ್ಕು, ಇದಕ್ಕೆ ನಿಮ್ಮ ಪಕ್ಷವೂ ಹೊರತಲ್ಲ ಎಂಬುದನ್ನು ನೀವೂ ಅಲ್ಲಗಳೆಯುವಂತಿಲ್ಲ. ಕೇವಲ ಯುಪಿಎ ಅಥವಾ ಕಾಂಗ್ರೆಸ್ ಅನ್ನು ಲೇವಡಿ ಮಾಡಿ ಏನು ಪ್ರಯೋಜನ. ನಿಮ್ಮದೇ ಬಿಜೆಪಿಯ ಕಡೆಗೂ ವಸಿ ನೋಡಿ.

ಜೇಟ್ಲಿ ಇನ್ನೂ ಏನೆಲ್ಲ ಹೇಳಿದ್ದಾರೆ?:
'ಮುಂದಿನ ಲೋಕಸಭಾ ಚುನಾವಣೆ ನಿಜಕ್ಕೂ ಧರ್ಮಯುದ್ಧವಾಗಲಿದೆ. 2ಜಿ ಸ್ಪೆಕ್ಟ್ರಂ ಹಗರಣ, ಕಲ್ಲಿದ್ದಲ್ಲು ಹಗರಣ, ಬೊಫೋರ್ಸ್ ಹಗರಣಗಳ ಮೂಲಕ ಯುಪಿಎ ಆಡಳಿತಾವಧಿಯಲ್ಲಿ ಹಲವು ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ. ಒಂದು ದೃಷ್ಟಿಯಿಂದ ನೋಡಿದರೆ ಯುಪಿಎ ಸರಕಾರ ಭ್ರಷ್ಟಾಚಾರ ಹಗರಣಗಳ ಸಣ್ಣ ಕೈಗಾರಿಕೆಯನ್ನೇ ನಡೆಸುತ್ತಿದೆ- ಜೇಟ್ಲಿ

ಮತ್ತೆ ಅಧಿಕಾರ ಹಿಡಿಯಬೇಕೆನ್ನುವ ಲಾಲಸೆ ಯುಪಿಎಗೆ
ಯುಪಿಎ ಸಚಿವರನ್ನು ಮತ್ತು ನಾಯಕರನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರವು ಸಿಬಿಐಯನ್ನು ತನ್ನ ಹಿಡಿತದಲ್ಲಿರಿಸಿದೆ ಎಂದು ಆರೋಪಿಸಿರುವ ಜೇಟ್ಲಿ ಈ ಮೂಲಕ ಇನ್ನೊಮ್ಮೆ ಅಧಿಕಾರ ಸೂತ್ರ ಹಿಡಿಯಬೇಕು ಎನ್ನುವ ಆಸೆ ಯುಪಿಎ ಮನದಲ್ಲಿ ಆಳವಾಗಿ ಬೇರೂರಿದೆ ಎಂದಿದ್ದಾರೆ.

ಸಿಬಿಐ ಮೃದು ಧೋರಣೆ ಹಿಂದೆ 'ಕೈ'ವಾಡ
ಅಕ್ರಮ ಆಸ್ತಿ ಹೊಂದಿರುವ ಹಗರಣಗಳಿಗೆ ಸಂಬಂಧಿಸಿದಂತೆ ಎಸ್‌ಪಿ ಮತ್ತು ಬಿಎಸ್‌ಪಿ ನಾಯಕರ ವಿರುದ್ಧ ಸಿಬಿಐ ಮೃದು ಧೋರಣೆ ತಳೆದಿದೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬ ಆತ್ಮವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪರಿಹಾರಾರ್ಥ ನರೇಂದ್ರ ಮೋದಿಯೇ
ಇದಕ್ಕೆ ಪರಿಹಾರಾರ್ಥವಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕಾಣಿಸಿಕೊಳ್ಳುತ್ತಾರೆ. ಅವರು ಜನಾಭಿಪ್ರಾಯ ಮತಗಟ್ಟೆಯಲ್ಲಷ್ಟೇ ಮುಂಚೂಣಿ ನಾಯಕರಾಗಿಲ್ಲ. ಬದಲಿಗೆ ಜನಮಾನಸದ ಭದ್ರವಾಗಿ ತಳವೂರಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರನ್ನು ಜೇಟ್ಲಿ ಹುರಿದುಂಬಿಸಿದರು.












Click it and Unblock the Notifications