ಬೇಹುಗಾರಿಕೆ ಎಚ್ಚರಿಕೆ, ವಿ.ನಿಲ್ದಾಣದಲ್ಲಿ ಹೆಚ್ಚಿದ ಭದ್ರತೆ

ದೇಶದಲ್ಲಿ 3ನೇ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ಮತ್ತು ನಿರ್ಗಮನದಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಎಲ್ಲ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ ಎಂದು ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಸೋಮವಾರ ತಿಳಿಸಿದರು.
ದಿನಕ್ಕೆ 400 ವಿಮಾನಗಳು ಬಂದಿಳಿಯುವ ದೇವನಹಳ್ಳಿ ಬಳಿಯ ಏರ್ಪೋರ್ಟ್ ಮತ್ತು ಸುತ್ತಮುತ್ತ 200ರಿಂದ 250 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಗರದಾದ್ಯಂತ ಪೊಲೀಸ್ ಗಸ್ತನ್ನು ಚುರುಕುಗೊಳಿಸಲಾಗಿದೆ ಎಂದು ಪಂತ್ ಅವರು ಮಾಧ್ಯಮದವರಿಗೆ ವಿವರಿಸಿದರು.
ವಿವಿಐಪಿಗಳಿರುವ ಪ್ರದೇಶ, ಎಲ್ಲ ಸೆಟಲೈಟ್ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣ, ಪ್ರಮುಖ ಮಾಲ್ ಗಳು, ವಾಣಿಜ್ಯ ಸಂಕಿರ್ಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಯಾವುದೇ ಶಂಕಿತ ವ್ಯಕ್ತಿಯನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲ ಸಾಮಾನುಗಳನ್ನು ಅತ್ಯಂತ ಕೂಲಂಕಷವಾಗಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಎಲ್ಲ ಬ್ಯಾಗುಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಸಂಶಯಾಸ್ಪದ ಪ್ರಯಾಣಿಕರನ್ನು ಕೂಡ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಭದ್ರತೆಗೆ ಬೇಕಾದ ಎಲ್ಲ ಕ್ರಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಐಎಸ್ಎಫ್ ಸಿಬ್ಬಂದಿ ತಿಳಿಸಿದರು.
ಪ್ರಯಾಣಿಕರು ಮಾತ್ರವಲ್ಲ ಕಾರ್ಗೋ ವಾಹನ, ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು, ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆತರುವ ವಾಯುವಜ್ರ ವಿಶೇಷ ಬಸ್ಸುಗಳನ್ನು ಕೂಡ ತಪಾಸಣೆಗೆ ಗುರಿಪಡಿಸಲಾಗುತ್ತಿದೆ ಎಂದು ಪಂತ್ ಅವರು ತಿಳಿಸಿದರು.












Click it and Unblock the Notifications