ಲೋಕಸಭೆ ಉಪ ಚುನಾವಣೆಗೆ ಮುಹೂರ್ತ ಫಿಕ್ಸ್

ಸಂಸದರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಚೆಲುವರಾಯ ಸ್ವಾಮಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಶಾಸಕರಾಗಿರುವುದರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕ್ಷೇತ್ರಗಳಿಗೆ ಆಗಸ್ಟ್ 21ರಂದು ಚುನಾವಣೆ ನಡೆಯಲಿದೆ.
ಶುಕ್ರವಾರ ರಾತ್ರಿ ಲೋಕಸಭಾ ಉಪಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಗಸ್ಟ್ 21ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಆಗಸ್ಟ್ 24ರಂದು ಮತ ಎಣಿಕೆ ನಡೆಯಲಿದೆ.
ವೇಳಾಪಟ್ಟಿ ಪಕ್ರಟವಾದ ತಕ್ಷಣ ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಎಲ್ಲ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೀತಿ ಸಂಹಿತೆ ಅನ್ವಯಿಸಲಿದೆ ಎಂದು ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಷ್ಠೆಯ ಹೋರಾಟ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಮೊದಲ ಲೋಕಸಭೆ ಉಪ ಚುನಾವಣೆ ಎದುರಿಸಬೇಕಾಗಿದೆ. ಎರಡೂ ಕ್ಷೇತ್ರಗಳಲ್ಲಿ ಹಿಂದೆ ಜೆಡಿಎಸ್ ಜಯಗಳಿಸಿತ್ತು, ಆದ್ದರಿಂದ ಉಪ ಚುನಾವಣೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕಣವಾಗಲಿದೆ.
ವಿಧಾನಸಭೆ ಪ್ರತಿಪಕ್ಷನಾಯಕ ಎಚ್.ಡಿ.ಕುಮಾರಸ್ವಾಮಿ ತಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮತ್ತು ಮಂಡ್ಯ ಜಿಲ್ಲೆಯ ಸ್ಥಾನಗಳನ್ನು ಗೆಲ್ಲಲು ರಣತಂತ್ರ ರೂಪಿಸುತ್ತಾರೆ. ಮಂಡ್ಯ ಕಾಂಗ್ರೆಸ್ ನಲ್ಲಿ ಬಂಡಾಯದ ಹೊಗೆ ಆಡುತ್ತಿರುವುದು ಸಿದ್ದರಾಮಯ್ಯ ಪಾಲಿಗೆ ಸವಾಲಾಗಿದೆ. (ಮತ್ತೆ ಶುರುವಾಯ್ತ ಮಂಡ್ಯ ಕಾಂಗ್ರೆಸ್ ಸಮರ!)
ಇಬ್ಬರ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರಗಳಿಗೆ ಸದ್ಯ ಚುನಾವಣೆಯಿಲ್ಲ ಎಂದು, ಲೋಕಸಭೆ ಚುನಾವಣೆಗೆ ಸಿದ್ಧವಾಗಿದ್ದ ಪಕ್ಷಗಳ ಲೆಕ್ಕಾಚಾರ ವೇಳಾಪಟ್ಟಿಯಿಂದ ತಲೆಕೆಳಗಾಗಿದೆ. ಹಿಂದೆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಗಳಿಸಿದ್ದರಿಂದ, ಪಕ್ಷದ ಪಾಲಿಗೆ ಉಪ ಚುನಾವಣೆ ಪ್ರಮುಖವಾಗಿದೆ. (ಸ್ವಾಮಿ ಅಂಡ್ ಸ್ವಾಮಿ ರಾಜೀನಾಮೆ)
ಯಡಿಯೂರಪ್ಪ ಮರಳಿ ಕರೆತರುವುದು. ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ನಡುವೆ ಮೈತ್ರಿ ಸೇರಿದಂತೆ ಬಿಜೆಪಿಯಲ್ಲಿ ಹಲವು ಗೊಂದಲಗಳಿದ್ದು, ಪಕ್ಷ ಉಪ ಚುನಾವಣೆಗೆ ಹೇಗೆ ಸಿದ್ಧವಾಗಲಿದೆ ಎಂದು ಕಾದು ನೋಡಬೇಕಾಗಿದೆ. ಉಪ ಚುನಾವಣೆ ಮುಂದಿನ ಚುನಾವಣೆ ಮೇಲೆ ಪ್ರಭಾವ ಬೀರುವುದರಿಂದ, ವಿವಿಧ ರಾಜಕೀಯ ಪಕ್ಷಗಳು, ತಯಾರಿ ಆರಂಭಿಸಿವೆ.
ಚುನಾವಣೆ ವೇಳಾಪಟ್ಟಿ
ಜುಲೈ 27 - ಅಧಿಸೂಚನೆ ಪ್ರಕಟಣೆ
ಆಗಸ್ಟ್ 3 - ನಾಮಪತ್ರ ಸಲ್ಲಿಸಲು ಕೊನೆಯ ದಿನ
ಆಗಸ್ಟ್ 5 - ನಾಮಪತ್ರಗಳ ಪರಿಶೀಲನೆ
ಆಗಸ್ಟ್ 7 - ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
ಆಗಸ್ಟ್ 21- ಮತದಾನ
ಆಗಸ್ಟ್ 24 - ಮತ ಎಣಿಕೆ
ಬೆಂಗಳೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರಗಳು : ಕನಕಪುರ, ಕುಣಿಗಲ್, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಚನ್ನಪಟ್ಟಣ.
ಮಂಡ್ಯ ವಿಧಾನಸಭೆ ಕ್ಷೇತ್ರಗಳು : ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ












Click it and Unblock the Notifications