ಮುಂಗಾರು ಮಳೆಯಲ್ಲಿ ಮಿಂದೆದ್ದ ಕರ್ನಾಟಕ
ಬೆಂಗಳೂರು, ಜು.20 : ರಾಜ್ಯದಲ್ಲಿ ಶುಕ್ರವಾರ ವರುಣದೇವನ ಅಬ್ಬರ ಜೋರಾಗಿತ್ತು. ಬೆಂಗಳೂರು, ಕರಾವಳಿ, ಮಲೆನಾಡು, ಕೊಡಗು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಸುರಿದಿದೆ. ಪಿರಿಯಾಪಟ್ಟಣದಲ್ಲಿ ವ್ಯಕ್ತಿಯೊಬ್ಬರು ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿದ್ದಾರೆ.
ಮಹಾನಗರ ಬೆಂಗಳೂರಿನಲ್ಲಿಯೂ ಸಂಜೆ ಭಾರೀ ಮಳೆಯಾಗಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಜನಸಾಮಾನ್ಯರು ಪರದಾಡುವಂತಾಯಿತು. ನಗರದಲ್ಲಿ ಮೋಡ ಕವಿದ ವಾತಾವರಣ ಶನಿವಾರವೂ ಮುಂದುವರೆದಿದ್ದು, ಮಳೆ ಬೀಳುವ ಸಾಧ್ಯತೆ ಇದೆ.
ಕೊಡಗು : ಕೊಡಗಿನಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಶನಿವಾರ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶನಿವಾರ ಬೆಳಗ್ಗೆಯೂ ಮಳೆಯ ಅಬ್ಬರ ಮುಂದುವರೆದಿದೆ.
ಕರಾವಳಿ : ಕರಾವಳಿಯಲ್ಲಿ ಮಳೆಯ ಜೊತೆಗೆ ಬೀಸುತ್ತಿರುವ ಶೀತಗಾಳಿ ಜನರನ್ನು ಆತಂಕಗೊಳಿಸಿದೆ. ಅರಬ್ಬಿ ಸಮುದ್ರದಲ್ಲಿ ಬಲವಾದ ಶೀತಗಾಳಿ ಬೀಸಿದ ಪರಿಣಾಮ ಮೀನುಗಾರಿಕೆಗೆ ತೆರಳಿದ ನಾಡದೋಣಿಗಳು ಅರ್ಧದಲ್ಲೇ ಹಿಂದಿರುಗಿವೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ನಾನಘಟ್ಟ ಸಂಪೂರ್ಣವಾಗಿ ಜಲಾವೃತವಾಗಿದೆ. ಕುಮಾರಧಾರಾ ನದಿಯ ಸೇತುವೆ ಮುಳುಗಡೆಯಾಗಿದ್ದು, ಶುಕ್ರವಾರ ರಾತ್ರಿ ಸುಬ್ರಹ್ಮಣ್ಯ - ಧರ್ಮಸ್ಥಳ - ಉಪ್ಪಿನಂಗಡಿ- ಬೆಂಗಳೂರು-ಮಂಗಳೂರು ನಡುವಿನ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಮಲೆನಾಡಿನಲ್ಲೂ ಆರ್ಭಟ : ಮಲೆನಾಡಿನಲ್ಲೂ ಮಳೆಯ ಅಬ್ಬರ ಹೆಚ್ಚಾಗಿದೆ. ಶರಾವತಿ, ಭದ್ರಾ, ಮಾಲತಿ, ಕುಮುದ್ವತಿ ನದಿಗಳು ತುಂಬಿ ಹರಿಯುತ್ತಿವೆ. ಮಂಡಗದ್ದೆಯಲ್ಲಿ ನೀರು ರಸ್ತೆ ಮಟ್ಟದಲ್ಲಿ ಹರಿಯುತ್ತಿದ್ದು, ಶಿವಮೊಗ್ಗ-ಮಂಗಳೂರು ನಡುವಿನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಸಾಗರ ತಾಲೂಕಿನಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 42,695 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯ ಭರ್ತಿಯಾಗಲು 25 ಅಡಿ ನೀರು ಬೇಕಾಗಿದೆ.
ಉತ್ತರ ಕರ್ನಾಟಕದಲ್ಲಿಲ್ಲೂ ಮಳೆ : ಉತ್ತರ ಕರ್ನಾಟಕದಲ್ಲೂ ವರುಣ ದೇವ ತನ್ನ ಶಕ್ತಿ ತೋರಿಸಿದ್ದಾನೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ಚಿಕ್ಕೋಡಿ ತಾಲೂಕಿನ ಸದಲಗಾ-ಬೋರಗಾಂವ, ಜತ್ರಾಟ- ಭೀವಶಿ ಹಾಗೂ ಯಡೂರ-ಕಲ್ಲೋಳ ಸೇತುವೆಗಳು ಜಲಾವೃತಗೊಂಡಿದ್ದು, ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿವೆ. ಬೀದರ್ ಜಿಲ್ಲೆಯಲ್ಲಿಯೂ ಮಳೆಯ ಅಬ್ಬರಕ್ಕೆ ಮೂರು ಮನೆಗಳು ಕುಸಿದಿವೆ.
ಎಲ್ಲಿ ಎಷ್ಟು ಮಳೆಯಾಗಿದೆ : ಮಡಿಕೇರಿಯಲ್ಲಿ 15 ಸೆಂ.ಮೀ, ಆಗುಂಬೆಯಲ್ಲಿ 12, ಭಾಗಮಂಡಲದಲ್ಲಿ 11, ಲಿಂಗನಮಕ್ಕಿಯಲ್ಲಿ 9, ಸುಳ್ಯಾ, ಗೇರುಸೊಪ್ಪ, ಬೀದರ್ ನ ಬಾಲ್ಕಿಯಲ್ಲಿ 8, ಅಂಕೋಲ, ಸಿರಸಿ, ನಾಪೋಕ್ಲು, ಪೊನ್ನಂಪೇಟೆ, ವಿರಾಜಪೇಟೆ, ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ 7 ಸೆಂ.ಮೀ.ಮಳೆಯಾಗಿದೆ.
ಮುನ್ಸೂಚನೆ : ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನಚ್ಚರಿಗೆ ನೀಡಿದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.












Click it and Unblock the Notifications