'ಸಡಗರದ ಹನುಮಂತಿ'ಯ ತಬ್ಬಿಬ್ಬುಗೊಳಿಸಿದ ವರುಣ!
ವರುಣ ಕೆಲವೊಮ್ಮೆ ಎಂತಹ ಬುದ್ಧಿವಂತರನ್ನು ಪೇಚಿಗೆ ಸಿಕ್ಕಿಸುತ್ತಾನೆ ಎಂಬುದು ಶುಕ್ರವಾರ ಸುರಿದ ಮಳೆಯಿಂದ ಸಾಬೀತಾಯಿತು. ಸರಕಾರದ ವ್ಯವಸ್ಥೆಯನ್ನು, ಅವ್ಯವಸ್ಥೆಯನ್ನು ತಿದ್ದಲು, ಕೊಂಕು ನುಡಿಯಲು ಸದಾ ತುದಿಗಾಲಲ್ಲಿ ನಿಂತಿರುವಂತೆ ತೋರುವ ಬೆಂಗಳೂರಿನ 'ಸಡಗರದ ಹನುಮಂತಿ' ಇನ್ಫೋಸಿಸ್-ನ್ನು ವರುಣನ ಅರ್ಭಟ ಕೆಲಹೊತ್ತು ತಬ್ಬಿಬ್ಬುಗೊಳಿಸಿತು.
ರಾಜ್ಯ ಹವಾಮಾನ ಇಲಾಖೆಯ ಮಾನ ಉಳಿಸಿದ ಮಳೆಯಿಂದಾಗಿ ಎಲ್ಲೆಡೆ ನೀರೋ ನೀರು... ಟೆಕ್ಕಿಗಳು ಕೆಲಕ್ಷಣ ಗಾಬರಿಗೊಂಡರು. ವರುಣ ಕೇಳಿದ ಕಠಿಣ ಪ್ರಶ್ನೆಗಳಿಗೆ ಅಲ್ಲೊಂದು ನಿರುತ್ತರಕಾಂಡವೆ ಸೃಷ್ಠಿಯಾಯಿತು. ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಬೆಂಗಳೂರಿನ ಇನ್ಫೋಸಿಸ್-ನಲ್ಲಿ ಒಂದು ಸಣ್ಣ ಸ್ಕೇಲಿನ ಜಲಪ್ರಳಯವೇ ಆಗಿಹೋಯಿತು.
ಆ ಬಗ್ಗೆ ಒಂದು ಸಚಿತ್ರ ವರದಿ ಇಲ್ಲಿದೆ. ಸುಖವಾಗಿ ಎ.ಸಿ ಬಿಲ್ಡಿಂಗ್-ನಲ್ಲಿ ಕುಳಿತು ಕೆಲಸ ಮಾಡುವ ಟೆಕ್ಕಿಗಳಿಗೆ ಒಂದು ಕ್ಷಣ ರೋಮಾಂಚನ, ಮತ್ತೊಂದು ಕಡೆ ಭಯ. ಎಲ್ಲೆಡೆ ಕೊಂಚ ಗಲಿಬಿಲಿ. ಕೆಲವರಿಗೆ ಶುಕ್ರವಾರದ ಸಂಜೆ ಬೇಗ ಮನೆ ತಲುಪುವ ಬಗ್ಗೆ ಆತಂಕ, ಇನ್ನು ಕೆಲವರಿಗೆ ಸಂಜೆ 'ಡಾಕ್ಟರ್ ಮಲ್ಯ' ಜೊತೆ ಇರುವ ಅಪಾಯಿಂಟ್ಮೆಂಟ್ ಚಿಂತೆ!
ಕೊನೆಗೆ ಮಿಂಚಿನ ವೇಗದಲ್ಲಿ ಕಟ್ಟಿಕೊಂಡಿದ್ದ ಮೋರಿಗಳನ್ನು ಸರಿ ಪಡಿಸಲಾಯಿತು. ಕಟ್ಟಿಕೊಂಡಿದ್ದ ನೀರೆಲ್ಲಾ ಹರಿದುಹೋಗಿ ಹಾಗು ಹೀಗೂ ಸುಖಾಂತವಾಯಿತು ಎನ್ನಿ. ಕನ್ನಡಿಗರ ಹೆಮ್ಮೆಯ ಇನ್ಫೋಸಿಸ್ ಸದಾ ತಂಪಾಗಿರಲಿ, ಸೊಂಪಾಗಿ ಬೆಳೆಯಲಿ, ಆರೋಗ್ಯಕರ ಟೀಕೆಗೆ ತನ್ನನ್ನು ಸದಾ ತೆರೆದುಕೊಳ್ಳಲಿ ಎಂಬುದೇ ನಮ್ಮ ಆಶಯ!

ಸಣ್ಣ ದ್ವೀಪದಂತಾದ ಇನ್ಫೋಸಿಸ್ ಕ್ಯಾಂಪಸ್
ಇದು ಯಾವುದೇ ಮಲೆನಾಡಿನ ದೃಶ್ಯವಲ್ಲ. ಸಾಫ್ಟ್ ವೇರ್ ಹಬ್ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಕಂಡುಬಂದ ದೃಶ್ಯ. ಧೋಧೋ ಮಳೆಗೆ ಇಡೀ ಕ್ಯಾಂಪಸ್ ಸಣ್ಣ ದ್ವೀಪದಂತಾಗಿತ್ತು.

ಅಯ್ಯೋ ಪಾಪ ಸೈಕಲ್ ಗಳು
ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನಲ್ಲಿ 4.6 ಸೆಂ.ಮೀ.ನಷ್ಟು ಶುಕ್ರವಾರ ಮಳೆಯಾಗಿದೆ. ಇನ್ನೂ ಎರಡು ದಿನ ಹೀಗೇ ಮುಂದುವರಿಯಲಿದೆ ಎಂದು ಇಲಾಖೆಯ ನಿರ್ದೇಶಕ ಪುಟ್ಟಣ್ಣ ಅವರು ಮುನ್ಸೂಚನೆ ನೀಡಿದ್ದಾರೆ.

ಕೊಡೆ ತಂದವರೇ ಅದೃಷ್ಟವಂತರು
ನಿರಂತರವಾಗಿ ಮಳೆ ಸುರಿದಿದ್ದರಿಂದ ಸಾಫ್ಟಿಗಳು ಒಂದು ಕಟ್ಟಡದಿಂದ ಇನ್ನೊಂದಕ್ಕೆ ಸಂಚರಿಸಲು ಪರದಾಡಬೇಕಾಯಿತು. ಬಣ್ಣಬಣ್ಣದ ಕೊಡೆ ಹಿಡಿದುಕೊಂಡವರೇ ಅದೃಷ್ಟವಂತರು ಎಂಬಂತಾಗಿತ್ತು.

ಯಾರಪ್ಪಾ ಅವರಿಬ್ಬರು?
ಮಳೆಯ ಜೊತೆಗೆ ಗಡಗಡ ನಡುಗಿಸುವ ಚಳಿಗಾಳಿ ಬೆಂಗಳೂರಿನ ಜನರನ್ನು ತಬ್ಬಿಬ್ಬುಗೊಳಿಸಿದೆ. ಅಯ್ಯೋ ಇಂಥ ಹೊತ್ತಿನಲ್ಲಿ ಬಿಸಿಬಿಸಿ ಬೊಂಡಾ ತಿನ್ನುತ್ತ, ಕಾಫಿ ಹೀರುತ್ತ ಕನ್ನಡ ಸಿನೆಮಾ ನೋಡುತ್ತ ಮನೆಯಲ್ಲಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಎಷ್ಟೋ ಜನರಿಗೆ ಅನ್ನಿಸಿದ್ದು ಸುಳ್ಳಲ್ಲ.

ಮಳೆ ಮಳೆ ಮಳೆ ಮಳೆಯೋ
ಮಳೆಯನ್ನು ಲೆಕ್ಕಿಸದವರು ಮಹಿಳೆಯರೇ ಅನ್ನಬೇಕು. ಮಳೆಯಲ್ಲಿ ನೆನೆಯುತ್ತಾ ಓಡಾಡುವುದೆಂದರೆ ಹುಡುಗಿಯರಿಗೆ ಅದೇನು ಖುಷಿಯೋ? ಕಾಲೇಜು ಇದ್ದಲ್ಲಿ ಒಂದು ಸತಿ ಕಣ್ಣಾಡಿಸಿ. ಪೋಲಿ ಹುಡುಗರು ಸಿಗರೇಟು ಎಳೆಯುತ್ತ ಡಬ್ಬಿ ಅಂಗಡಿ ಕೆಳಗೆ ನಿಂತಿರುತ್ತಾರೆ, ನಾಟಿ ಹುಡುಗಿಯರು ಎದೆಗೆ ಬುಕ್ಕನ್ನು ತಬ್ಬಿಸಿಕೊಂಡು ಮಳೆಯನ್ನು ಲೆಕ್ಕಿಸದೆ ಹೋಗುತ್ತಿರುತ್ತಾರೆ. ಒಪ್ತೀರಿ ತಾನೆ?

ಸುಂದರ ವಾತಾವರಣದಲ್ಲಿ ಸುಂದರ ಚಿತ್ರಣ
ಕೆಲವರು ಮಳೆಯನ್ನು ಶಪಿಸುತ್ತಿದ್ದರೆ ಹಲವರಿಗೆ ಬೆಂಗಳೂರಿನಲ್ಲಿ ಸದ್ಯ ಇಷ್ಟಾದರೂ ಮಳೆಯಾಗುತ್ತಿದೆಯಲ್ಲ ಎಂಬ ಸಂತೋಷ. ಮಳೆಯಲ್ಲಿ ನೆನೆದರೂ ಚಿಂತೆಯಿಲ್ಲ ಬೆಂಗಳೂರಿನ ನೀರಿನ ದಾಹ ಇಂಗಲಿ ಎಂಬುದು ಅವರ ಭಾವವಾಗಿತ್ತು. ಎಷ್ಟು ನಿಜ!

ಛತ್ರಿ ತರಲು ಮಾತ್ರ ಮರೆಯಬೇಡಿ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಅದರ ಪರಿಣಾಮ ಬೆಂಗಳೂರಿನ ಮೇಲೂ ಆಗುತ್ತಿದೆ. ಇಲ್ಲದಿದ್ದರೆ ಹೀಗೆ ಮಳೆಯೆಲ್ಲಿ ಸುರಿಯುತ್ತದೆ ಬೆಂಗಳೂರಿನಲ್ಲಿ? ಏನೇ ಆಗಲಿ ಮನೆಯಿಂದ ಹೊರಬೀಳುವಾಗ ಕೊಡೆ ತೆಗೆದುಕೊಂಡು ಹೋಗುವುದನ್ನು ಮಾತ್ರ ಮರೆಯಬಾರದು.

ಇನ್ನೂ ಒಂದೆರಡು ದಿನ ಮುಂದುವರಿಕೆ
ಶುಕ್ರವಾರದಂಥ ಜಿಟಿಜಿಟಿ ಮಳೆ ಇನ್ನೆರಡು ದಿನ ಸುರಿಯಲಿದೆ ಅಂತ ಹವಾಮಾನ ತಜ್ಞ ಪುಟ್ಟಣ್ಣ ಅವರು ಹೇಳಿದ್ದಾರೆ. ಹವಾಮಾನ ತಜ್ಞರ ಮಾನ ಉಳಿಸುತ್ತದಾ ಈ ಮಳೆ. ಅಯ್ಯೋ ಬೆಂಗಳೂರು ವೆದರನ್ನು ನಂಬುವ ಹಾಗಿಲ್ಲ. ಇನ್ನೇನು ಭಾರೀ ಮಳೆ ಸುರಿಯುತ್ತದೆ ಅನ್ನುವಾಗಲೇ ವಾಯುದೇವ ಮೋಡವನ್ನು ಹಾರಿಸಿಕೊಂಡು ಹೋಗಿರುತ್ತಾನೆ.

ಇದು ಮಲೆನಾಡಿನ ಮಳೆಗಾಲದ ಚಿತ್ರವಲ್ಲ
ಮಲೆನಾಡುಗಳಲ್ಲಿ ಭಾರೀ ಮಳೆ ಸುರಿದಾಗ ಅಲ್ಲಲ್ಲಿ ಉಂಟಾಗುವ ಸಣ್ಣ ಜಲಪಾತದಂತೆ ಕ್ಯಾಂಪಸ್ಸಿನಲ್ಲಿಯೂ ಸಣ್ಣದೊಂದು ಜಲಪಾತ ಸಷ್ಟಿಯಾಗಿತ್ತು. ನೋಡುವುದಕ್ಕೆ ಎಷ್ಟು ಸಖತ್ತಾಗಿತ್ತು ಗೊತ್ತಾ?

ವರುಣ ದೇವನಿಗೊಂದು ಥ್ಯಾಂಕ್ಸ್
ಸಡಗರದಿಂದ ಸುರಿದ ಮಳೆಯಿಂದಾಗಿ ಕ್ಯಾಂಪಸ್ಸಿನಲ್ಲಿ ಎಲ್ಲೆಲ್ಲೂ ನೀರೋ ನೀರು. ಮೊಣಕಾಲುದ್ದ ನೀರು ನಿಂತಿದ್ದರಿಂದ ಅಡ್ಡಾಡುವುದೇ ಕಷ್ಟವಾಗಿತ್ತು.

ಸಣ್ಣತೊರೆ ದಾಟಲು ಹರಸಾಹಸ
ಮಳೆ ನಿಂತು ಹೋದ ಮೇಲೆ ಹೊಳೆಯನ್ನು ದಾಟಲೇಬೇಕಲ್ಲ, ಸಾಫ್ಟ್ ವೇರ್ ಉದ್ಯಮ ಸೇರಿಕೊಂಡ ಮೇಲೆ ಕೆಲಸ ಮಾಡಲೇಬೇಕಲ್ಲ! ಹೀಗಿತ್ತು ಇನ್ಫಿಯಲ್ಲಿ ದುಡಿಯುತ್ತಿರುವ ಮಹಿಳಾಮಣಿಗಳ ಪರಿಸ್ಥಿತಿ. ಕಿಲಿಕಿಲಿ ನಕ್ಕೊಂಡು, ಹರಟೆ ಹೊಡಕೊಂಡು ಸಖತ್ ಎಂಜಾಯ್ ಮಾಡಿದ್ದೇ ಮಾಡಿದ್ದು.

ಸೂಪರ್ ಸಾಪರ್ ಹಿಡಿದ ಸಿಬ್ಬಂದಿ
ಎಷ್ಟೇ ಮಳೆ ಸುರಿದು ಇಡೀ ಕ್ಯಾಂಪಸ್ ದ್ವೀಪದಂತಾಗಿದ್ದರೂ ಚರಂಡಿ ವ್ಯವಸ್ಥೆ ಅದ್ಭುತವಾಗಿರುವುದರಿಂದ ಕೆಲವೇ ನಿಮಿಷಗಳಲ್ಲಿ ನೀರೆಲ್ಲ ಕೊಚ್ಚಿಹೋಗಿ ರಸ್ತೆಗಳೆಲ್ಲ ಝಳಝಳ. ಮತ್ತೆ ಕೆಲಸ ಶುರು...

ರಾಜ್ಯಾದ್ಯಂತ ಭಾರೀ ಮಳೆ
ಮಡಿಕೇರಿ, ಮೈಸೂರು, ಶಿವಮೊಗ್ಗ, ಜಿಕ್ಕಮಗಳೂರು ಮುಂತಾದ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಡಿಕೇರಿಯಲ್ಲಿ ಶಾಲಾಕಾಲೇಜು ರಜಾ ಮುಂದುವರಿದಿದೆ. ಸಾಮಾನ್ಯ ಮಳೆಗಿಂತ ಶೇ.40ರಷ್ಟು ಜಾಸ್ತಿ ಮಳೆಯಾಗಿದೆ ಎಂಬುದು ಪುಟ್ಟಣ್ಣನವರ ಅಂಬೋಣ.

ಮಳೆಯೂ ಬರಲಿ ಕೊಡೆಯೂ ಇರಲಿ
ನಾಳೆ ನೋಡು ಸಖತ್ತಾಗಿ ಬಿಸಿಲು ಬೀಳತ್ತೆ, ಮಳೆನೂ ಇರಲ್ಲ, ಕೊಡೆಯೂ ಬೇಕಾಗಿಲ್ಲ ಎಂದು ಉದಾಸೀನ ಮಾಡದೆ ಮನೆಯಿಂದ ಹೊರಡುವಾಗ ಕೊಡೆ ಹಿಡಿಯುವುದನ್ನು ಮರೆಯಬೇಡಿ. ಯಾತಕ್ಕೂ ಮಡಿಚಿಟ್ಟ ಛತ್ರಿ ಬ್ಯಾಗಿನಲ್ಲಿ ಬೆಚ್ಚಗೆ ಕೂತಿರಲಿ.












Click it and Unblock the Notifications