ಬೇಬಿ ವಾಲೇಕರ್ ಅಮಾನತು ಆದೇಶ ರದ್ದು

ಈಶಾನ್ಯ ವಲಯದ ಐಜಿಪಿ ವಜೀದ್ ಅಹ್ಮದ್ ಅವರು ಬೇಬಿ ವಾಲೇಕರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿದ್ದಾರೆ. ಬೇಬಿ ವಾಲೇಕರ್ ಅವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ರಾಯಚೂರಿನ ಜನತೆ ಭಾರಿ ಪ್ರತಿಭಟನೆ ನಡೆಸಿತ್ತು. ನಗರದ ಮಾರ್ಕೆಟ್ ಯಾರ್ಡ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬೇಬಿ ವಾಲೇಕರ್ ಆರೋಪಿಯನ್ನು ಹಿಗ್ಗಾಮಗ್ಗ ಥಳಿಸಿ ಶಿಕ್ಷಿಸಿದ್ದರು.
ಕುಡಿತದ ಅಮಲಿನಲ್ಲಿ ಗಲಾಟೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆತಂದು ಆತನ ಎರಡೂ ಕೈಗಳನ್ನು ಇಬ್ಬರು ಪೊಲೀಸ್ ಪೇದೆಗಳಿಗೆ ಬಲವಾಗಿ ಎಳೆದು ಹಿಡಿದುಕೊಳ್ಳಲು ಹೇಳಿ ಹಿಂಬಂದಿಯಿಂದ ಆತನಿಗೆ ಬಾಸುಂಡೆ ಬರುವ ರೀತಿಯಲ್ಲಿ ಥಳಿಸಿರುವ ವರ್ತನೆಯನ್ನು ಹಲವರು ಬೆಂಬಲಿಸಿದ್ದರೆ ಕೆಲವರು ಮಾತ್ರ ಇದು ಅಮಾನವೀಯ ಹೀಗೆಲ್ಲಾ ಥಳಿಸುವುದು ಸಲ್ಲದು ಎಂದಿದ್ದರು.
ಮಹಿಳಾ ಪೊಲೀಸ್ ಅಧಿಕಾರಿ ಬೇಬಿ ವಾಲೇಕರ್ ತಮ್ಮ ಬಲವಾದ ಎರಡೂ ಕೈಗಳನ್ನು ಬಳಸಿ ಎರಡೆರಡು ಲಾಠಿಯನ್ನು ಒಟ್ಟಿಗೆ ಹಿಡಿದುಕೊಂಡು ಅಮಾನವೀಯವಾಗಿ ಥಳಿಸುತ್ತಿರುವ ದೃಶ್ಯ ಎಂಥವನನ್ನೂ ಬೆಚ್ಚಿ ಬೀಳಿಸುವಂತಿದ್ದು, ಈ ರೀತಿ ಚೆಚ್ಚುವ ವೇಳೆ ಅಚಾನಕ್ಕಾಗಿ ತಾಗಬಾರದ ಜಾಗಕ್ಕೆ ತಾಗಿ ಸಾವನ್ನಪ್ಪಿದ್ದರೆ ಅಥವಾ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದರೆ ಕುಡಿತದ ಅಮಲಿನಿಂದ ವ್ಯಕ್ತಿ ದುರ್ಮರಣ ಎಂದು ಎಸ್ಕೇಪ್ ಆಗಿಬಿಡುತ್ತಿದ್ದರೇನೋ ಎಂಬ ಮಾತುಗಳು ಕೇಳಿಬಂದಿತ್ತು.
ಪೇದೆಗಳಿಗೆ ಹೇಳಿ ಕುಡುಕನ ಕೈಗಳನ್ನು ಆಕಡೆ ಈ ಕಡೆ ಎಳೆದಿಟ್ಟುಕೊಂಡು ಗೋಡೆಗೆ ಅವನ ಮುಖ ಮಾಡಿಸಿದ್ದಾರೆ. ಬಳಿಕ ಪೊಸಿಷನ್ ಗೆ ಬಂದ ಮೇಡಂ ವಾಲೇಕರ್, ಒಂದೇ ಸಮನೆ ಅವನ ಅಂಡಿನ ಮೇಲೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ನಿಲ್ಲಿಸುವ ಮಾತೇ ಇಲ್ಲ ಎಂಬಂತೆ ಅವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು.
ಆದರೆ ಇದನ್ನೆಲ್ಲ ಯಾರೋ ರಹಸ್ಯವಾಗಿ ವಿಡಿಯೋ ಮಾಡಿಕೊಂಡು ಟಿವಿ ಚಾನೆಲುಗಳಿಗೆ ರವಾನಿಸಿದ್ದರು. ಮೇಡಂ ವಾಲೇಕರ್ ಅವರ ರೌದ್ರಾವತಾರ ಟಿವಿಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮೇಲಧಿಕಾರಿಗಳಿಗೆ ಎಲ್ಲೋ, ಏನೋ ಎಡವಟ್ಟಾಗಿರುವುದು ಅರಿವಿಗೆ ಬಂದಿದೆ. ತಕ್ಷಣ ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ಇಲಾಖೆ ರಿಪೋರ್ಟ್ ಕೇಳಿತ್ತು. ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು.












Click it and Unblock the Notifications