ಅತ್ಯಾಚಾರಕ್ಕೆ ಯತ್ನ: ಹಾಡಹಗಲೇ ಒಂಟಿ ಗೃಹಿಣಿಯ ಹತ್ಯೆ

ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಳೇಕಹಳ್ಳಿ, ಗುರುರಾಜ ಲೇಔಟ್ ನಲ್ಲಿ ವಾಸವಿದ್ದ ಸುಮತಿ (21) ಕೊಲೆಯಾದ ಮಹಿಳೆ. ಕೋಲ್ಕೊತಾದ ಪೂರ್ವ ಮೇದಿನಾಪುರ ಜಿಲ್ಲೆಯ ಸುಮತಿ, ಮೂರು ವರ್ಷಗಳ ಹಿಂದೆ ಬಿಶ್ವಜಿತ್ ಓಜಾ (26)ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಅವರಿಬ್ಬರು ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ರಾಜ್ ಲೇಕ್ ಅಪಾರ್ಟ್‌ಮೆಂಟ್ ಕೆಳಗೆ ಸಣ್ಣ ಮನೆಯಲ್ಲಿ ವಾಸವಿದ್ದರು.
ಸುಮತಿ ಅಪಾರ್ಟ್ ಮೆಂಟ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆದರೆ, ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಪತಿ ಸಹ ಅಡುಗೆ ಕೆಲಸ ಮಾಡುತ್ತಿದ್ದು, ಪ್ರತಿದಿನ ಬೆಳಗ್ಗೆ ಹೋದರೆ ರಾತ್ರಿ ಮನೆಗೆ ಬರುತ್ತಿದ್ದರು. ಎಂದಿನಂತೆ ಬಿಶ್ವಜಿತ್ ಗುರುವಾರ ಬೆಳಗ್ಗೆ ಕೆಲಸಕ್ಕೆ ಹೋಗಿದ್ದರು.
ಸುಮತಿ ಪಕ್ಕದ ಮನೆಯಲ್ಲೇ ವಾಸವಿದ್ದ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಮೂಲದ ಶೇಖರ್ (45) ಆಕೆಯನ್ನು ಕೊಲೆ ಮಾಡಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶೇಖರ್ ಗ್ಯಾರೇಜ್ ವೊಂದರಲ್ಲಿ ಮೆಕಾನಿಕ್ ಅಗಿ ಕೆಲಸ ಮಾಡುತ್ತಿದ್ದು, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ದೊಡ್ಡವನು 10ನೆ ತರಗತಿಯಲ್ಲಿ ಓದುತ್ತಿದ್ದರೆ, ಚಿಕ್ವಳು 8ನೇ ತರಗತಿಯಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
'ನಾನು ಮನೆಗೆಲಸಕ್ಕೆ ಹೋಗುತ್ತೇನೆ. ಸುಮತಿಯ ಭಾಷೆ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಆಕೆಯ ಒಡನಾಟವಿರಲಿಲ್ಲ. ಮಧ್ಯಾಹ್ನ 3 ಗಂಟೆಗೆ ಮನೆಗೆ ಬಂದಾಗ ವಿಷಯ ತಿಳಿಯಿತು. ಪತಿ ಏಕೆ ಹೀಗೆ ಮಾಡಿದರೋ ಗೊತ್ತಾಗ್ತಿಲ್ಲ' ಎಂದು ಶೇಖರನ ಪತ್ನಿ ಹೇಳಿದ್ದಾರೆ.
ಹೇಗಾಯ್ತು?: ಶೇಖರ ನಿನ್ನೆ ಗುರುವಾರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಸುಮತಿಯ ಪತಿ ಬಿಶ್ವಜಿತ್ 11 ಗಂಟೆಯಲ್ಲಿ ಮನೆಯಿಂದ ಹೊರಹೋಗಿದ್ದನ್ನು ದುರುಳ ಗಮನಿಸಿದ್ದಾನೆ. ಆತ ಹೊರಹೋಗುತ್ತಿದ್ದಂತೆ ಮನೆಯಲ್ಲಿ ಸುಮತಿ ಏಕಾಂಗಿಯಾಗಿರುವುದನ್ನು ಗಮನಿಸಿ, ಅವರ ಮನೆಗೆ ನುಗ್ಗಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಅದಕ್ಕೆ ಸುಮತಿ ತೀವ್ರ ಪ್ರತಿರೋಧವೊಡ್ಡಿದ್ದಾಳೆ. ಅದರ ಮಧ್ಯೆ, (11.28ಕ್ಕೆ) ಪತಿಯ ಮೊಬೈಲಿಗೆ ಕರೆ ಮಾಡಿದ್ದಾಳೆ. ಆದರೆ ಮಾತನಾಡಲು ಸಾಧ್ಯವಾಗಿಲ್ಲ. ಇತ್ತ ಪತಿ ಬಿಶ್ವಜಿತ್ ಗೆ ಮನೆಯಲ್ಲಿ ಭಾರಿ ಶಬ್ದವಾಗುತ್ತಿರುವುದು ಮಾತ್ರ ಕೇಳಿಸಿದೆ. ಇದರಿಂದ ಗಾಬರಿಗೊಂಡ ಬಿಶ್ವಜಿತ್ ಕೆಲಸ ಬಿಟ್ಟು ತಕ್ಷಣ ಮನೆಗೆ ವಾಪಸಾಗಿದ್ದಾರೆ.
ಈ ಮಧ್ಯೆ, ತನ್ನ ಯೋಜನೆ ಫಲ ನೀಡಲಿಲ್ಲ ಎಂದು ಶೇಖರ್ ವೈರಿನಿಂದ ಸುಮತಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಮುಖ, ಕೈ ಮತ್ತಿತರ ಕಡೆ ಪರಚಿದ ಗಾಯದ ಗುರುತುಗಳಿವೆ. ಹಂತಕನಿಗೆ ಕಚ್ಚಿರುವ ಚರ್ಮ ಸಹ ಮಹಿಳೆಯ ಬಾಯಿಯಲ್ಲಿ ಹಾಗೆಯೇ ಇತ್ತು. ಕೊಲೆ ಮಾಡುವ ಮುನ್ನ ಹಂತಕ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶರ್ಟ್ ಗುಂಡಿ, ತಾಯತ ಪತ್ತೆ : ಸುಮತಿ ಮನೆಯಲ್ಲಿ ಶರ್ಟ್ ಗುಂಡಿಯೊಂದು ಹಾಗೂ ತಾಯತ ಪತ್ತೆಯಾಗಿದೆ. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಂತಕ ಹಾಗೂ ಸುಮತಿ ಸೆಣಸಾಟದಲ್ಲಿ ಗುಂಡಿ ಹಾಗೂ ತಾಯತ ಕೆಳಗೆ ಬಿದ್ದಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅನುಮಾನದ ಮೇಲೆ ಶೇಖರನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಆತ ಕುಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾನೆ.












Click it and Unblock the Notifications