'ಬಸವಣ್ಣ' ಶೀರ್ಷಿಕೆ ವಿರುದ್ಧ ಸಿಡಿದೆದ್ದ ಬಸವ ಭಕ್ತರು
ಬೀದರ್, ಜು. 17 : ಹನ್ನೆರಡನೇ ಶತಮಾನದಲ್ಲಿ ಕ್ರಾಂತಿ ಎಬ್ಬಿಸಿದ್ದ ಜಗಜ್ಯೋತಿ ಬಸವಣ್ಣನ ಹೆಸರಿನಲ್ಲಿ ಚಿತ್ರೀಕರಣವಾಗುತ್ತಿರುವ 'ಬಸವಣ್ಣ' ಕರ್ನಾಟಕ ವಿಧಾನಸಭೆಯಲ್ಲಿ ಮಾತ್ರವಲ್ಲ ಬಸವೇಶ್ವರರ ತವರು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬೀದರ್ ಜಿಲ್ಲೆಯ ಶರಣರು ಚಿತ್ರ ನಿರ್ದೇಶಕ ಶ್ರೀನಿವಾಸರಾಜು ಮತ್ತು ನಾಯಕ ನಟ ಉಪೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ.
ನಿರ್ದೇಶಕರ ಉದ್ದೇಶ ಏನೇ ಇರಲಿ, ಈ ಚಿತ್ರಕ್ಕೆ 'ಬಸವಣ್ಣ' ಎಂಬ ಶೀರ್ಷಿಕೆ ಇಡಬಾರದಿತ್ತು. ತಲೆ ಬೋಳಿಸಿಕೊಂಡು, ವಿಭೂತಿ ಬಳಿದುಕೊಂಡು ಕೈಯಲ್ಲಿ ರಕ್ತಸಿಕ್ತ ಖಡ್ಗ ಹಿಡಿದ ಉಪೇಂದ್ರ ಅವರು ನಟಿಸುತ್ತಿರುವ ಚಿತ್ರದ ಈ ಶೀರ್ಷಿಕೆ ಶರಣರನ್ನು ಮಾತ್ರವಲ್ಲ, ಇಡೀ ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ ಎಂದು ಶರಣ ಶರಣೆಯರು ದಂದೆ ಎದ್ದಿದ್ದಾರೆ.
ಸಾಮ, ಭೇದ ಕೆಲಸಕ್ಕೆ ಬಾರದಿದ್ದರೆ ದಂಡದ ಮುಖಾಂತರ ನಾಡಿನ ಶರಣರು ಉತ್ತರ ನೀಡಬೇಕಾಗುತ್ತದೆ. ಜನರು ರೊಚ್ಚಿಗೇಳುವ ಮುನ್ನ ನಿರ್ದೇಶಕರು ತಮ್ಮನ್ನು ತಾವು ಸರಿಪಡಿಸಿಕೊಂಡರೆ ಸರಿ, ಇಲ್ಲದಿದ್ದರೆ ಮುಂದಿನ ಘಟನಾವಳಿಗೆ ಅವರೇ ಕಾರಣರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಹೀಗೆಂದು ಬೀದರ್‌ನ ಶಿವಶರಣೆ ಡಾ. ಗಂಗಾಂಬಿಕಾ ತಾಯಿ ಅವರು ಕಟ್ಟೆಚ್ಚರಿಕೆ ನೀಡಿದ್ದಾರೆ. ಹಿಂದೊಮ್ಮೆ ಉಪೇಂದ್ರ ಅವರು ಬೀದರ್‌ಗೆ ಬಂದಾಗ ಇಲ್ಲಿಯ ಜನರು ಅವರನ್ನು ಅಪಾರವಾಗಿ ಗೌರವಿಸಿದ್ದರು, ಅವರ ಚಿತ್ರ ನೋಡಿ ಬೆನ್ನು ತಟ್ಟಿದ್ದರು. ಈಗ ಅವರೇ ಇಂಥ ಅವಮಾನಕಾರಿಯಾದ ಚಿತ್ರದಲ್ಲಿ ನಟಿಸುತ್ತಿರುವುದು ನಿಜಕ್ಕೂ ವಿಷಾದನೀಯ. ಜನರು ರೊಚ್ಚಿಗೆದ್ದು ನಿಂತರೆ ಯಾವ ಚಿತ್ರವೂ ನಿಲ್ಲುವುದಿಲ್ಲ. ಅದಕ್ಕೂ ಮೊದಲು ಈ ಶೀರ್ಷಿಕೆಯಿಂದ ಅವರೇ ದೂರ ಸರಿಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಶರಣ ಉದ್ಯಾನ ಬಸವಗಿರಿಯ ಅಕ್ಕ ಅನ್ನಪೂರ್ಣ ಅವರು ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕ ಚಲನಚಿತ್ರ ಮಂಡಳಿಗೆ ಈ ವಿವಾದದ ಬಗ್ಗೆ ಗೊತ್ತಿದೆಯೋ ಇಲ್ಲವೋ ತಿಳಿಯುತ್ತಿಲ್ಲ. ಆದರೆ, ದುಡ್ಡು ಗಳಿಸಲು ಇಂಥ ಚೀಪ್ ಮಟ್ಟದ ಪ್ರಚಾರ ತಂತ್ರವನ್ನು ನಿರ್ದೇಶಕರು ಬಳಸಬಾರದು. ಹಿಂದೆ ದಂಡುಪಾಳ್ಯ ಮಾಡಿದಾಗಲೂ ಇದೇ ಶ್ರೀನಿವಾಸರಾಜು ವಿವಾದ ಸೃಷ್ಟಿಸಿದ್ದರು. ಇದು ಸಮಾಜದಲ್ಲಿ ಕ್ಷೋಭೆ ತರುವಂಥದ್ದು. ಜನರಲ್ಲಿ ಕಲಹ ಎಬ್ಬಿಸುವ ಇಂಥ ಶೀರ್ಷಿಕೆಯ ಅಗತ್ಯವೇ ಇಲ್ಲ ಎಂದು ತಮ್ಮ ಆಕ್ರೋಶ ತೋಡಿಕೊಂಡಿದ್ದಾರೆ.
ಭಾಲ್ಕಿಯಲ್ಲಿರುವ ಹಿರೇಮಠ ಮಹಾಸಂಸ್ಥಾನದ ಸ್ವಾಮೀಜಿ ಕೂಡ 'ಬಸವಣ್ಣ' ವಿವಾದಾತ್ಮಕ ಶೀರ್ಷಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶೀರ್ಷಿಕೆ ಇಟ್ಟು ಚಿತ್ರದ ನಿರ್ದೇಶಕರು ಶರಣರಿಗೆ ಮಾತ್ರವಲ್ಲ ನಾಡಿನ ಜನತೆಗೆ ಅವಮಾನ ಮಾಡಿದ್ದಾರೆ. ನಾವು ಸುಮ್ಮನೆ ಕೂಡುವುದಿಲ್ಲ. ಸಂಘಟಿತರಾಗಿ ಇದರ ವಿರುದ್ಧ ಹೋರಾಡುತ್ತೇವೆ. ಶೀರ್ಷಿಕೆ ಹಿಂದೆ ಪಡೆಯುವವರೆಗೆ ಸುಮ್ಮನೆ ಕೂಡವುದಿಲ್ಲ ಎಂದು ಹೇಳಿದ್ದಾರೆ. ಈ ವಿವಾದಾತ್ಮಕ ಶೀರ್ಷಿಕೆಯನ್ನು ವಿರೋಧಿಸಿ ಓದುಗರು ಕೂಡ ಪತ್ರ ಬರೆದಿದ್ದಾರೆ.













Click it and Unblock the Notifications