ಮಠ-ಮಂದಿರಗಳಿಗೆ ಬಿಜೆಪಿ ಕೊಟ್ಟಿದ್ದು 610 ಕೋಟಿ!
ಬೆಂಗಳೂರು, ಜು. 16 : ಅಭಿವೃದ್ಧಿಯೇ ನಮ್ಮ ಮೂಲಮಂತ್ರ ಎಂದು ಹೇಳಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಮಠ ಮಾನ್ಯಗಳಿಗೆ ಉದಾರವಾಗಿ ಅನುದಾನ ನೀಡಿದೆ ಎಂಬುದು ಸತ್ಯ. ಆದರೆ, ಮೂರು ವರ್ಷಗಳಲ್ಲಿ ಸರ್ಕಾರ ಮಠಗಳಿಗೆ ಕೊಟ್ಟ ಮೊತ್ತವೆಷ್ಟು ಗೊತ್ತೆ ಬರೋಬ್ಬರಿ 610.7 ಕೋಟಿ ರೂಪಾಯಿ!
ಈ ಮಾಹಿತಿಯನ್ನು ಸ್ವತಃ ಮುಜರಾಯಿ ಸಚಿವ ಪ್ರಕಾಶ್ ಹುಕ್ಕೇರಿ, ಸೋಮವಾರ ವಿಧಾನಸಭೆ ಕಲಾಪದಲ್ಲಿ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಮುಖಭಂಗ ಉಂಟು ಮಾಡಿದ್ದಾರೆ. ಪ್ರತಿಪಕ್ಷಗಳ ಟೀಕೆಗೂ ಮಣಿಯದೆ ಬಿಜೆಪಿ ಸರ್ಕಾರ ಮಠಗಳಿಗೆ ಕೋಟಿ ಕೋಟಿ ಅನುದಾನ ನೀಡಿತ್ತು.
ಬೆಳ್ತಂಗಡಿ ಶಾಸಕ ವಸಂತ ಬಂಗೇರ ಹಿಂದಿನ ಸರ್ಕಾರದ ಅವಧಿಯಲ್ಲಿ ಮಠಗಳಿಗೆ ನೀಡಲಾಗಿರುವ ಅನುದಾನದ ವಿವರ ನೀಡುವಂತೆ ಲಿಖಿತ ಪ್ರಶ್ನೆ ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿರುವ ಮುಜರಾಯಿ ಸಚಿವರು ಅಂಕಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಮೂರು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳು 13029 ಮಠ ಹಾಗೂ ದೇವಾಲಯಗಳಿಗೆ 610.7 ಕೋಟಿ ರೂ. ಅನುದಾನ ನೀಡಿದ್ದಾರೆ. ಹೊರ ರಾಜ್ಯಗಳಲ್ಲಿರುವ 28 ಮಠ-ಮಂದಿರಗಳಿಗೂ 31 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಯಡಿಯೂರಪ್ಪ ಅವರಿಂದ ಪ್ರಾರಂಭ
ಮಠಗಳಿಗೆ ಮೊದಲು ಅನುದಾನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿ, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ. ಅನಂತರ ಡಿ.ವಿ.ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಸಹ ಮಠಗಳಿಗೆ ಅನುದಾನ ನೀಡುವ ಸಂಪ್ರದಾಯ ಮುಂದುವರೆಸಿದರು.

ಕೆಲವು ಜಿಲ್ಲೆಗಳಿಗೆ ಹೆಚ್ಚು
ಮಠಗಳಿಗೆ ಅನುದಾನ ನೀಡುವಲ್ಲಿಯೂ ಕೆಲವು ಜಿಲ್ಲೆಗಳಿಗೆ ಸರ್ಕಾರ ಆದ್ಯತೆ ನೀಡಿದೆ. ಬೆಳಗಾವಿಯ-620, ದಾವಣಗೆರೆಯ-792, ಗುಲ್ಬರ್ಗದ-452, ತುಮಕೂರಿನ-881, ಶಿವಮೊಗ್ಗದ- 897 ಹಾಗೂ ಚಿತ್ರದುರ್ಗದ 1333 ಮಠ-ಮಂದಿರಗಳಿಗೆ 192.81 ಕೋಟಿ ರೂ. ಅನುದಾನ ನೀಡಲಾಗಿದೆ.

ಉತ್ತರ ಕರ್ನಾಟಕಕ್ಕೂ ಆದ್ಯತೆ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಚೊಚ್ಚಲ ಬಜೆಟ್ ಮಂಡಿಸಿದ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕ ಭಾಗದ ಮಠಗಳಿಗೂ ಹೆಚ್ಚು ಅನುದಾನ ನೀಡಿದರು. ಧಾರವಾಡದ-162, ಗದಗದ-238 ಬಳ್ಳಾರಿಯ-101, ಬಾಗಲಕೋಟೆಯ-262, ಬಿಜಾಪುರದ-430, ಬೀದರ್ ಜಿಲ್ಲೆಯ -149, ಹಾವೇರಿಯ-296, ಕೊಪ್ಪಳದ-505, ರಾಯಚೂರಿನ-203 ಮಠ ಮತ್ತು ದೇವಾಲಯಗಳಿಗೂ ಅನುದಾನ ನೀಡಲಾಗಿದೆ.

ಎಲ್ಲಾ ಜಿಲ್ಲೆಗಳಿಗೂ ಆದ್ಯತೆ
ಅನುದಾನ ನೀಡುವ ವಿಚಾರದಲ್ಲಿ ಯಾವ ಜಿಲ್ಲೆಗಳನ್ನು ಸರ್ಕಾರ ಕಡೆಗಣಿಸಿಲ್ಲ. ಬೆಂಗಳೂರು ನಗರದ-315, ಬೆಂಗಳೂರು ಗ್ರಾಮಾಂತರದ -147, ಚಾಮರಾಜನಗರದ-146, ಚಿಕ್ಕಬಳ್ಳಾಪುರದ-245, ಚಿಕ್ಕಮಗಳೂರಿನ-413, ದಕ್ಷಿಣ ಕನ್ನಡದ-525, ಹಾಸನದ-515, ಕೊಡಗಿನ-370, ಕೋಲಾರದ-357, ಮಂಡ್ಯದ-513, ಮೈಸೂರಿನ-302, ರಾಮನಗರದ-332, ಉಡುಪಿಯ-1012 ಮಠ ಮತ್ತು ಮಂದಿರಗಳಿಗೆ ಅನುದಾನ ನೀಡಲಾಗಿದೆ.

ಯಾವ ವರ್ಷ ಎಷ್ಟು ಹಣ
ಬಿಜೆಪಿ ಸರ್ಕಾರ 2010-11ನೇ ಸಾಲಿನಲ್ಲಿ 2809 ದೇವಾಲಯ ಹಾಗೂ 130 ಮಠಗಳಿಗೆ 199.10 ಕೋಟಿ ರೂ., 2011-12 ನೇ ಸಾಲಿನಲ್ಲಿ 4070 ದೇವಾಲಯ ಹಾಗೂ 183 ಮಠಗಳಿಗೆ 167.87 ಕೋಟಿ ರೂ., 2012-13 ನೇ ಸಾಲಿನಲ್ಲಿ 5,583 ದೇವಾಲಯ ಹಾಗೂ 252 ಮಠಗಳಿಗೆ 250.22 ಕೋಟಿ ರೂ. ಅನುದಾನ ನೀಡಿದೆ.

ಸಿದ್ದರಾಮಯ್ಯ ಏನು ಮಾಡಿದರು
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಹುದ್ದೆಗೆ ಏರಿ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಅವರು ಮಠಗಳಿಗೆ ನೇರವಾಗಿ ಹಣ ನೀಡುವ ಪರಿಪಾಠವನ್ನು ನಿಲ್ಲಿಸಿದ್ದಾರೆ. ಆದರೆ, ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ಆರ್ಥಿಕವಾಗಿ ದುರ್ಬಲವಾದ ಹಿಂದುಳಿದವರ ಮಠಗಳಿಗೆ 75 ಕೋಟಿ ರೂ. ಮೀಸಲಿಟ್ಟಿದ್ದಾರೆ.












Click it and Unblock the Notifications