ಮಳೆ: ಮೋರಿ ನೀರಿನಲ್ಲಿ ಕೊಚ್ಚಿಹೋದ ಬಾಲಕ

ಹೊಸಪೇಟೆ ನಗರದ ಚಪ್ಪರದಳ್ಳಿ ಜಲಾಂಜನೇಯ ದೇವಸ್ಥಾನದ ಬಳಿ ಮಳೆ ನೀರಿನಿಂದ ತುಂಬಿ ಹರಿಯುತ್ತಿದ್ದ ಮೋರಿಯಲ್ಲಿ ಇಬ್ಬರು ಬಾಲಕರು ಸೋಮವಾರ ಸಂಜೆ ಕೊಚ್ಚಿ ಹೋಗಿದ್ದಾರೆ. ಆದರೆ ಒಬ್ಬ ಬಾಲಕನ್ನು ಬದುಕಿಸಲು ಊರಿನ ದೇವ ಜಲಾಂಜನೇಯನಿಗೂ ಸಾಧ್ಯವಾಗಿಲ್ಲ. ಮತ್ತೂಬ್ಬ ಬದುಕಿ ಬಂದಿದ್ದಾನೆ.
ನಗರದ ರಾಧೇ ಮಾರ್ಕೆಟ್ ಮಾಲಿಕರಾದ ಕಿರಣ್ ಸಿಂಗ್ ಅವರ ಮಗ ರಿತೀಶ್ ಸಿಂಗ್ (6) ಮೃತಪಟ್ಟ ಬಾಲಕ. ಬಲ್ ಸಿಂಗ್ ಅವರ ಮಗ ಪೂರನ್ ಸಿಂಗ್ (6) ಬದುಕುಳಿದಿದ್ದಾನೆ. ಇಬ್ಬರೂ ಸ್ಥಳೀಯ ರೋಜ್ ಬಡ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಗಳು. ಸಂಜೆ ಶಾಲೆಯಿಂದ ಮನೆಗೆ ಮರಳುವಾಗ ಈ ಘಟನೆ ನಡೆದಿದೆ.
ರಭಸದಿಂದ ನೀರು ಹರಿಯುತ್ತಿದ್ದುದರಿಂದ ಸ್ವಲ್ಪ ದೂರ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೂರನ್ ಸಿಂಗ್ ನನ್ನು ಹೊರಗೆಳೆದಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಆದರೆ ರಿತೀಶ್ ಸಿಂಗ್ ಮೋರಿಯೊಳಗೆ ಸಾಕಷ್ಟು ದೂರ ಕೊಚ್ಚಿ ಹೋಗಿದ್ದರಿಂದ ಬದುಕಿಸಲು ಸಾಧ್ಯವಾಗಿಲ್ಲ. ಮಳೆ ಬಂದಾಗ ರಸ್ತೆ ಹಾಗೂ ಮೋರಿ ನಡುವೆ ವ್ಯತ್ಯಾಸ ಗೊತ್ತಾಗದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಉಡುಪಿ ತಾಲೂಕು ಗಿಳಿಯಾರು ಗ್ರಾಮದ ಮಿಣ್ಣು ಮರಕಾಲ್ತಿ ಎಂಬ ಮಹಿಳೆ ಹಳ್ಳಕ್ಕೆ ಬಿದ್ದು ಸಾವಿಗೀಡಾಗಿದ್ದಾರೆ. ಭಾನುವಾರ ನಾಪತ್ತೆಯಾಗಿದ್ದ ಇವರ ಮೃತದೇಹ ಸೋಮವಾಋ ಪತ್ತೆಯಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ತಾಲೂಕಿನ ಗಡಿ ಭಾಗದಲ್ಲಿ ನಿರಂತರವಾಗಿ ಸುರಿದ ಮಳೆ ಸೋಮವಾರ ಇಳಿಮುಖವಾಗಿದೆ. ಇದರಿಂದ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಚಿಕ್ಕೋಡಿ ತಾಲೂಕಿನ ಮೂರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ ಇನ್ನೂ ನಾಲ್ಕು ಸೇತುವೆಗಳು ನೀರಿನಲ್ಲಿಯೇ ಮುಳುಗಿವೆ.
ತಾಲೂಕಿನ ಭೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ ಹಾಗೂ ಕಾರದಗಾ-ಭೋಜ ಸೇತುವೆಗಳು ಸೋಮವಾರ ಬೆಳಗ್ಗೆ ಸಂಚಾರಕ್ಕೆ ಮುಕ್ತವಾಗಿದ್ದು, ಮಲಿಕವಾಡ-ದತ್ತವಾಡ, ಜತ್ರಾಟ-ಭೀವಶಿ, ಸದಲಗಾ-ಬೋರಗಾಂವ ಹಾಗೂ ಕಲ್ಲೋಳ-ಯಡೂರ ಸೇತುವೆಗಳು ಇನ್ನೂ ಜಲಾವೃತಗೊಂಡಿವೆ.
ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೃಷ್ಣಾ ನದಿಗೆ ಒಟ್ಟು 87,880 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯ ತುಂಬಲು ಇನ್ನೆರಡು ಮೀಟರ್ ಬಾಕಿ ಇದೆ. ಸೋಮವಾರ ಜಲಾಶಯದಲ್ಲಿ 516.800 ನೀರು ಸಂಗ್ರಹವಾಗಿತ್ತು.












Click it and Unblock the Notifications