ಬಿಜೆಪಿ ಜೊತೆ ಸೇರಿದ ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್!

ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ವಿಧಾನಸಭೆಯೊಳಗೆ ಸರ್ಕಾರವನ್ನು ಟೀಕಿಸಲು, ನಾವು ಕೆಜೆಪಿ ಮತ್ತು ಬಿಎಸ್ಆರ್ ಶಾಸಕರ ಬೆಂಬಲ ಕೇಳುತ್ತೇವೆ ಎಂದರು.
ಈ ಕುರಿತು ಎರಡೂ ಪಕ್ಷಗಳ ಅಧ್ಯಕ್ಷರ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸಲಾಗುವುದು. ಬಿಜೆಪಿಯ 40 ಶಾಸಕರ ಜೊತೆ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕರು ಸೇರಿದರೆ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.
ಬಿಜೆಪಿ ಟೀಕಿಸುವುದೇ ಕಾರಣ : ಸಿಎಂ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಕ್ಷಣದಿಂದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ಆಡಳಿತ ನಡೆಸಲು ವಿಫಲವಾಗಿತ್ತು ಎಂದು ದೂರುತ್ತಿದ್ದಾರೆ.
ಇದರಿಂದಾಗಿ ಸರ್ಕಾರವನ್ನು ಸರಿಯಾಗಿಯೇ ಇಕ್ಕಟಿಗೆ ಸಿಲುಕಿಸಬೇಕೆಂದು ಬಿಜೆಪಿ ತಂತ್ರ ರೂಪಿಸಿದೆ. ಆದ್ದರಿಂದ ಕೆಜೆಪಿ ಮತ್ತು ಬಿಎಸ್ಆರ್ ನಾಯಕರನ್ನು ಸೇರಿಸಿಕೊಂಡರೆ ವಿಧಾನಸಭೆಯಲ್ಲಿ ತನ್ನ ಬಲ ಹೆಚ್ಚುತ್ತದೆ ಎನ್ನುವುದು ಪಕ್ಷದ ಲೆಕ್ಕಾಚಾರ.
ಆದ್ದರಿಂದ ಪಕ್ಷದ 40 ಶಾಸಕರು ವಿಧಾನಸಭೆಯೊಳಗೆ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಶಾಸಕರೊಂದಿಗೆ ಮೈತ್ರಿ ಮಾಡಿಕೊಳ್ಳಲು ಒಕ್ಕೊರಲಿನಿಂದ ಬೆಂಬಲ ಸೂಚಿಸಿದ್ದಾರೆ. ಮೂವರು ಒಂದಾದರೆ ಸಿದ್ದರಾಮಯ್ಯ ಅವರಿಗೆ ಸದನದಲ್ಲಿ ಸಂಕಷ್ಟ ತಪ್ಪಿದ್ದಲ್ಲ.
ಇವರಿಗೆ ಅನಿವಾರ್ಯ : ಬಿಜೆಪಿ ಜೊತೆ ಮೈತ್ರಿಮಾಡಿಕೊಮಡರೆ ವಿಧಾನಸಭೆಯೊಳಗೆ ತಮ್ಮ ಬಲ ಹೆಚ್ಚುತ್ತದೆ ಎಂಬುದು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲು ಅವರಿಗೂ ತಿಳಿದಿದೆ. ಕೇವಲ ನಾಲ್ವರು ಶಾಸಕರನ್ನು ಪಕ್ಷ ಹೊಂದಿದೆ. ಅವರು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸಲು ಕೆಲವು ಶಾಸಕರ ಬೆಂಬಲ ಬೇಕಾಗುತ್ತದೆ. ಆದ್ದರಿಂದ ಈ ವಿಧಾನಸಭೆಯೊಳಗಿನ ಮೈತ್ರಿಗೆ ಅವರು ಅಸ್ತು ಎನ್ನುವುದರಲ್ಲಿ ಅನುಮಾನವಿಲ್ಲ.
ಬಿಎಸ್ವೈ ಬೆಂಕಿಚೆಂಡು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಾತಿನಲ್ಲಿ ಸೋಲಿಸುವವರು ಇಲ್ಲ. ವಿಧಾನಸಭೆ ಕಲಾಪದಲ್ಲಿ ನಿರರ್ಗಳವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಷ್ಟು ಅನುಭವ ಮತ್ತು ಶಕ್ತಿ ಯಡಿಯೂರಪ್ಪ ಅವರಿಗೆ ಇದೆ. ಅವರು ಸದನದಲ್ಲಿ ಬಿಜೆಪಿಯೊಂದಿಗೆ ಕೈ ಜೋಡಿಸಿದರೆ, ಸರ್ಕಾರಕ್ಕೆ ತಲೆನೋವು ತಪ್ಪಿದ್ದಲ್ಲ.
ಮೈತ್ರಿಯ ಮುನ್ಸೂಚನೆಯೇ : ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತವೆ ಎಂಬ ಉಹಾಪೋಹಗಳು ಹರಿದಾಡುತ್ತಿವೆ. ವಿಧಾನಸಭೆಯೊಳಗೆ ಮೈತ್ರಿ ಮಾಡಿಕೊಂಡವರು ಸದನದ ಹೊರಗೂ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದರೆ ಬಿಜೆಪಿಯ ಬಲ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.












Click it and Unblock the Notifications