ದಾವೂದ್ ಜೊತೆ ಶ್ರೀಶಾಂತ್ ಮೇಲೂ ಚಾರ್ಜ್ ಶೀಟ್?
ನವದೆಹಲಿ, ಜು.15: ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ್ದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶೀಘ್ರದಲ್ಲೇ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕಿಲ್, ಕ್ರಿಕೆಟ್ ಆಟಗಾರ ಶ್ರೀಶಾಂತ್ ಸೇರಿದಂತೆ 26 ಮಂದಿ ಮೇಲೆ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲು ಮುಂದಾಗಿದ್ದಾರೆ.
ದೆಹಲಿ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ದೆಹಲಿ ಪೊಲೀಸರು ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ವಿವರಣೆ ಪಡೆಯಲಿದ್ದಾರೆ. ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಮೇಲೆ ಕೇರಳ ಸೇರಿ ಸಿನಿಮಾ ಹಾಗೂ ಕ್ರಿಕೆಟ್ ತರಬೇತಿಯಲ್ಲಿ ತೊಡಗಿರುವ ಶ್ರೀಶಾಂತ್ ಗೆ ಮತ್ತೆ ಪೊಲೀಸ್ ಭೀತಿ ಶುರುವಾಗಿದೆ. MCOCA ಸೇರಿದಂತೆ ಹಲವು ಕಾಯ್ದೆಯಡಿಯಲ್ಲಿ ಪ್ರಕರಣಗಳು ಶ್ರೀಶಾಂತ್ ಮೇಲೆ ದಾಖಲಾಗಿತ್ತು.
ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ ಛೋಟಾ ಶಕಿಲ್, ಕ್ರಿಕೆಟ್ ಆಟಗಾರರಾದ ಶ್ರೀಶಾಂತ್, ಅಜಿತ್ ಚಾಂಡೀಲಾ, ಅಂಕಿತ್ ಚೌಹಾಣ್ ಹಾಗೂ 26 ಮಂದಿ ಬುಕ್ಕಿಗಳು ಸೇರಿದಂತೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವವರ ಮೇಲೆ ಮಹಾರಾಷ್ಟ್ರ ಅಪರಾಧ ನಿಯಂತ್ರಣ ಕಾಯ್ದೆ (ಮೊಕಾ) ಪ್ರಕಾರ ದೂರು ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಕ್ರಿಕೆಟ್ ಆಟಗಾರರು ಸೇರಿದಂತೆ 19 ಮಂದಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಐಪಿಎಲ್ ನ ಆರನೇ ಆವೃತ್ತಿಯಲ್ಲಿ ಕೆಲವು ಆಟಗಾರರು ಬುಕ್ಕಿಗಳನ್ನು ಸಂಪರ್ಕಿಸಿ ಭೂಗತ ಪಾತಕಿಗಳ ಜೊತೆ ಕೈ ಜೋಡಿಸಿ ಸ್ಪಾಟ್ ಫಿಕ್ಸಿಂಗ್ ಭಾಗಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ.

ಆಟಗಾರರು ತಂಗಿದ್ದ ಹೊಟೇಲ್‌ನಲ್ಲಿ ಬುಕ್ಕಿಗಳು ಭೂಗತ ಪಾತಕಿಗಳ ಜೊತೆ ನಡೆಸಿರುವ ಮಾತುಕತೆ ವಿವರ, ದೂರವಾಣಿ ಕರೆಗಳು ಸೇರಿದಂತೆ ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಮುಂಬೈ, ಚಂಡಿಗಢ, ಜೈಪುರ, ದೆಹಲಿ ಸೇರಿದಂತೆ ಮತ್ತಿತರ ಕಡೆ ಈ ಆಟಗಾರರು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿರುವುದರ ಆರೋಪವಿದೆ.
ಬುಕ್ಕಿಗಳು ಮತ್ತು ಆಟಗಾರರ ನಡುವೆ ನಡೆದಿರುವ ಮಾತುಕತೆ ಸಂಭಾಷಣೆ ವಿವರಣೆಯನ್ನು ಸಿಎಫ್ ಎಸ್ ಎಲ್ ನಿಂದ ಪತ್ತೆ ಹಚ್ಚಲಾಗಿದೆ. ಇದರಲ್ಲಿ ಸಿದ್ಧಾರ್ಥ್ ತ್ರಿವೇದಿ, ಹರ್ಮಿತ್ ಸಿಂಗ್, ಚಿತ್ರ ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾ ಸೇರಿದಂತೆ ಹಲವು ಆಟಗಾರರ ದೂರವಾಣಿ ವಿವರಗಳು ಪತ್ತೆಯಾಗಿವೆ.
MCOCAಕಾಯ್ದೆ ಪ್ರಕಾರ ತಪ್ಪೊಪ್ಪಿಗೆ ನೀಡುವ ಆರೋಪಿಗಳು ಅಥವಾ ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಉಪ ಪೊಲೀಸ್ ಆಯುಕ್ತ ಅಥವಾ ಅದೇ ಸ್ಥಾನದ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಬೇಕಿದೆ. ಇದರಿಂದ ಆರೋಪಿಗಳು ಮತ್ತು ಸಾಕ್ಷಿಗಳು ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಕಡಿವಾಣ ಬೀಳುತ್ತದೆ.
1994ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಜಾರಿಗೆ ಬಂದ ಮೋಕಾ ಕಾಯ್ದೆ ಯೋಜಿತ ಅಪರಾಧಗಳ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಗಳಿಗೆ ವಿಶೇಷ ಹಕ್ಕನ್ನು ನೀಡುತ್ತದೆ.
ಆರಂಭದಲ್ಲಿ ಈ ಕಾಯ್ದೆಯನ್ನು ಖೋಟಾ ನೋಟು ಚಲಾವಣೆ ಮತ್ತು ಮಂಪರು ಭಯೋತ್ಪಾದನೆ (ಮಾದಕ ವಸ್ತುಗಳ ಅನಧಿಕೃತ ರವಾನೆ ಮತ್ತು ಮಾದಕ ವಸ್ತುಗಳ ಕಾನೂನು ಬಾಹಿರ ಬಳಕೆ)ಯಂತಹ ಅಪರಾಧಗಳಲ್ಲಿ ಬಳಸಲಾಗುತ್ತಿತ್ತು. ಇದೀಗ ಇದೇ ಮೊದಲ ಬಾರಿಗೆ ಕ್ರೀಡಾ ಕ್ಷೇತ್ರದ ಅಪರಾಧಗಳ ಪತ್ತೆಗಾಗಿ ಬಳಕೆ ಮಾಡಲಾಗುತ್ತಿದೆ.
ದಾವೂದ್ ನಂಟು: ಬುಕ್ಕಿಗಳ ಜೊತೆ ಡಿ ಕಂಪನಿ ನಂಟಿರುವ ಬಗ್ಗೆ ಆಗಾಗ್ಗೆ ಕೇಳಿ ಬರುತ್ತಿರುತ್ತದೆ. ಬುಕ್ಕಿ ಟಿಂಕು ಮಂಡಿ ಈ ಬಗ್ಗೆ ಮಾಹಿತಿ ನೀಡಿದ್ದು, 2008ರಲ್ಲೇ ಶ್ರೀಶಾಂತ್ ಮೇಲೆ ದಾವೂದ್ ಇಬ್ರಾಹಿಂ ತಮ್ಮ ಅನೀಶ್ ಕಣ್ಣು ಹಾಕಿ ಬಲಿ ಕಾ ಬಕ್ರಾ ಮಾಡಲು ಸಿದ್ದತೆ ನಡೆಸಿದ್ದರು ಎಂಬ ವಿಷಯ ಸ್ಪಷ್ಟವಾಗಿದೆ.












Click it and Unblock the Notifications