ಮೂಡಬಿದಿರೆ ಜೈನ ವಿಗ್ರಹ ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ!?

ಜುಲೈ 5 ಶುಕ್ರವಾರ ರಾತ್ರಿ ಇತಿಹಾಸ ಪ್ರಸಿದ್ಧ, 10ನೇ ಶತಮಾನದ ಬಸದಿಯ ಸಿದ್ಧಾಂತ ದರ್ಶನ ಮಂದಿರಕ್ಕೆ ಕನ್ನ ಹಾಕಿ ಕೋಟ್ಯಂತರ ರೂ. ಮೌಲ್ಯದ ಅಪೂರ್ವ ವಿಗ್ರಹಗಳನ್ನು ಕಳುವು ಮಾಡಿರುವುದು ಶನಿವಾರ ಮುಂಜಾನೆ ಬೆಳಕಿಗೆ ಬಂದಿತ್ತು.
ಒಬ್ಬನೇ ಕಳ್ಳ ಮುಸುಕುಧಾರಿಯಾಗಿ ಮಂದಿರದೊಳಕ್ಕೆ ನುಗ್ಗಿ 7 ಸಿಸಿಟಿವಿಗಳನ್ನು ಬಂದ್ ಮಾಡಿ ಕಳ್ಳತನ ಮಾಡಿದ್ದ. ಆದರೆ 8ನೆಯ CCTV ಕ್ಯಾಮರಾದಲ್ಲಿ ಅಸ್ಪಷ್ಟವಾಗಿ ಅವನ ಚಹರೆ ದಾಖಲಾಗಿತ್ತು. ಇದು ಬಿಟ್ಟರೆ ಪೊಲೀಸರಿಗೆ ಬೇರೆ ಯಾವುದೇ ಸುಳಿವೂ ಇರಲಿಲ್ಲ.
ಆದರೇನಂತೆ ಇತ್ತೀಚಿನ ದಿನಗಳಲ್ಲಿ ಯಾವುದೇ ಪಾತಕ/ಅಪರಾಧವೇ ನಡೆದರೂ ಪೊಲೀಸರು ಹೆಚ್ಚು ತಲೆ ಕೆಡಿಸಿಕೊಳ್ಳುವ ಜರೂರತ್ತು ಬೀಳುವುದಿಲ್ಲ. ಏಕೆಂದರೆ ಪಾತಕಿಗಳು ತಾವೇ ತಾವಾಗಿ ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಾರೆ.
ಇಲ್ಲೂ ಅದೇ ಆಗಿದ್ದು ತನಿಖೆಗಿಳಿದ ಪೊಲೀಸರು CCTV ನೋಡಿದ ಬಳಿಕ, ಮೊದಲು ಸ್ಥಳೀಯ ಆಟೋ ಚಾಲಕರನ್ನು ವಿಚಾರಿಸಿಕೊಂಡಿದ್ದಾರೆ. ಜತೆಗೆ ಜೈನ ಯತಿಗಳೂ ಒಂದಷ್ಟು ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳೀಯ ಪೊಲೀಸರು ಆರೋಪಿಯ ರೇಖಾ ಚಿತ್ರ ಬಿಡಿಸಿಟ್ಟುಕೊಂಡಿದ್ದಾರೆ.
ಈ ಮಧ್ಯೆ ಹೊರಗಿನ ವ್ಯಕ್ತಿ ಅಂದರೆ ಉತ್ತರ ಭಾರತ ಮೂಲದ ವ್ಯಕ್ತಿ ಕಳ್ಳತನದಲ್ಲಿ ಪಾಲ್ಗೊಂಡಿರುವ ಬಗ್ಗೆ ಪೊಲೀಸರಿಗೆ ದಟ್ಟವಾದ ಅನುಮಾನ ಬಂದಿದೆ. ಮುಂದೆ ಪೊಲೀಸರು ಮೊಬೈಲ್ ಟವರ್ ಮೊರೆಹೋಗಿದ್ದಾರೆ! ಸ್ಥಳದಿಂದ ಹೊರ ಹೋದ ಕರೆಗಳನ್ನು ಜಾಲಾಡಿದ್ದಾರೆ.
ಒಂದು ಕರೆ ಸೀದಾ ಒರಿಸ್ಸಾದ ಭುವನೇಶ್ವರಕ್ಕೆ ಹೋಗಿದೆ. ತಕ್ಷಣ ಅಲರ್ಟ್ ಆದ ಪೊಲೀಸರು ಕಳ್ಳ ಸಿಕ್ಕಿಬೀಳುವ ಖುಷಿಯಲ್ಲಿ ಭುವನೇಶ್ವರಕ್ಕೆ ಹೋಗಿದ್ದಾರೆ. ಆದರೆ ಆತುರಕ್ಕೆ ಬೀಳದೆ ಸಾವಕಾಶವಾಗಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆರೋಪಿಯ ಚಲನವಲನದ ಮೇಲೆ ಕಣ್ಣಿಟ್ಟು ಯೋಜಿತ ರೀತಿಯಲ್ಲಿ ಅವನ ಮನೆಗೆ ದಾಳಿಯಿಟ್ಟಿದ್ದಾರೆ.
ಆದರೆ ಆ ವೇಳೆಯಲ್ಲಿ ಆರೋಪಿ ಮನೆಯಲ್ಲಿರಲಿಲ್ಲ. ಬದಲಿಗೆ ಕದ್ದ ಮಾಲುಗಳು ಮನೆಯಲ್ಲೇ ಇದ್ದವು. ಆದರೆ ಅವುಗಳಲ್ಲಿ ಕೆಲವು ಕರಗಿಹೋಗಿದ್ದವು. ಆದರೂ ಪೊಲೀಸರು ಆರೋಪಿ ಸಂತೋಷ್ ದಾಸ್ ಎಂದು ಪತ್ತೆಹಚ್ಚಿದ್ದು, ಈಗ ಅವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿ ಸಂತೋಷ್ ದಾಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿದ್ದು, ಈ ಹಿಂದೆ ಕೂಡಾ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಗುಜರಾತ್, ಆಂಧ್ರ ಪ್ರದೇಶ ಹಾಗೂ ನೇಪಾಳದಲ್ಲಿ ನಡೆದಿದ್ದ ವಿಗ್ರಹ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿಯೂ ಶಿಕ್ಷೆ ಅನುಭವಿಸಿದ್ದಾನೆ. ಮೂರು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಆರೋಪಿ ದೇಶಾದ್ಯಂತ ಹಲವಾರು ಬ್ಯಾಂಕುಗಳಲ್ಲಿ ಖಾತೆ ಹೊಂದಿರುವುದು ಪತ್ತೆಯಾಗಿದೆ.
ಮೂರು ವಿಗ್ರಹಗಳು, ಐದಕ್ಕೂ ಹೆಚ್ಚು ವಿಗ್ರಹಗಳನ್ನು ಕರಗಿಸಿ ತಯಾರಿಸಿದ 1.5 ಕೆಜಿ ತೂಕದ ಚಿನ್ನದ ಗಟ್ಟಿ, 20ಕ್ಕೂ ಹೆಚ್ಚು ವಜ್ರಖಚಿತ ಹರಳುಗಳು, 2.05 ಲಕ್ಷ ರೂ ನಗದು, 8 ಎಟಿಎಂ ಕಾರ್ಡ್‌ಗಳು, 10ಕ್ಕೂ ಹೆಚ್ಚು ಬ್ಯಾಂಕ್ ಚೆಕ್ ಬುಕ್, ಎರಡು ಮೊಬೈಲುಗಳು ಸೇರಿದಂತೆ ಒಟ್ಟು 3 ಕೋಟಿ ಮೌಲ್ಯದ ಸೊತ್ತುಗಳನ್ನು ಮೂಡಬಿದಿರೆ ಪೊಲೀಸರು ಆರೋಪಿ ಸಂತೋಷ್ ದಾಸ್ ನ ಮನೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಆರೋಪಿಗೆ ಸ್ಥಳೀಯರು ನೆರವಾಗಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.












Click it and Unblock the Notifications