ಬೈಕ್ ಡಿಕ್ಕಿ: ರಸ್ತೆ ವಿಭಜಕ ಎದೆಗೆ ನಾಟಿ ಟೆಕ್ಕಿ ಸಾವು

ಮತ್ತೊಂದು ಪ್ರಕರಣದಲ್ಲಿ, ಕೆಂಗೇರಿ ಬಳಿ ಚಲಿಸುತ್ತಿದ್ದ ರೈಲಿಗೆ ಸಾಫ್ಟ್ ವೇರ್ ಇಂಜಿನಿಯರ್ ತಲೆಕೊಟ್ಟು ಸಾವಿಗೀಡಾಗಿದ್ದಾನೆ.
ಎಲೆಕ್ಟ್ರಾನಿಕ್ ಸಿಟಿ ಬಳಿ ಇಂದು ಬೈಕಿನಲ್ಲಿ ಸ್ಪೀಡಾಗಿ ಚಲಿಸುತ್ತಿದ್ದಾಗ ಗಾಡಿ ಸ್ಕಿಡ್ ಆಗಿ ರಸ್ತೆ ವಿಭಜಕದ ಕಂಬಿ ಟೆಕ್ಕಿಯ ಎದೆಗೆ ನಾಟಿ, ಆತ ಸಾವಿಗೀಡಾಗಿದ್ದಾನೆ. ಮೃತ ಟೆಕ್ಕಿ ಮನೋಜ್ ಶೆಟ್ಟಿ (22) ಮೂಲತಃ ಶಿವಮೊಗ್ಗದ ಹೊಸದುರ್ಗದವರು. ಈತ ವೈಟ್ ಫೀಲ್ಡ್ ಬಳಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದರು.
ಭಾನುವಾರ ರಾತ್ರಿ ಬಸವನಗುಡಿಯಲ್ಲಿ ಸ್ನೇಹಿತನ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಮುಂಜಾನೆ ಮೂರು ಗಂಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಕಿಶನ್ ಜತೆ ಬೈಕಿನಲ್ಲಿ ತಮ್ಮ ಮನೆಗೆ ಮರಳುತ್ತಿದ್ದಾಗ ಈ ಅಪಘಾತವಾಗಿದೆ.
ಹೊಸೂರು ರಸ್ತೆ ಲೈವ್ ಆಸ್ಪತ್ರೆಯ ಬಳಿ ಬೈಕ್ ಸ್ಕಿಡ್ ಆದಾಗ ಮನೋಜ್ ಮತ್ತು ಕಿಶನ್ ಇಬ್ಬರೂ ಕೆಳಕ್ಕೆ ಹಾರಿದ್ದಾರೆ. ಮನೋಜ್ ಶೆಟ್ಟಿ ರಸ್ತೆ ವಿಭಜಕದ ಮೇಲೆ ಬಿದ್ದಿದ್ದಾನೆ. ಅದು ನೇರವಾಗಿ ಆತನ ಎದೆಗೆ ನಾಟಿ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಟೆಕ್ಕಿ ಸೋಮನಾಥ್ ಆತ್ಮಹತ್ಯೆ:
ಪದ್ಮನಾಭ ನಗರದ ಸಾಫ್ಟ್ ವೇರ್ ಇಂಜಿನಿಯರ್ ಸೋಮನಾಥ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 30 ವರ್ಷದ ಸೋಮನಾಥ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications