ಮೂಡಬಿದಿರೆ : ಬಸದಿ ವಿಗ್ರಹ ಪತ್ತೆ, ಇಬ್ಬರ ಬಂಧನ

ಶ್ರೀ ಆದಿನಾಥ ಸ್ವಾಮಿಯ ಪಂಚಲೋಹದ ವಿಗ್ರಹದ ಮೌಲ್ಯ ಹಲವು ಕೋಟಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಜು.5 ರಂದು ಸಿದ್ಧಾಂತ ಪ್ರತಿಮಾ ದರ್ಶನ ಬಸದಿಯಿಂದ ವಿಗ್ರಹವನ್ನು ಕಳುವು ಮಾಡಲಾಗಿತ್ತು. ಇದರ ಜೊತೆಗೆ ಬಸದಿಯಲ್ಲಿದ್ದ ಚಿನ್ನ, ಬೆಳ್ಳಿ ಪಂಚಲೋಹ ವಿಗ್ರಹಗಳು ನಾಪತ್ತೆಯಾಗಿತ್ತ್ತು.
ಈ ಸಂಬಂಧ ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ಮಾರ್ಗದರ್ಶನದಲ್ಲಿ ಎಸಿಪಿ ರವಿ ಕುಮಾರ್ ನೇತೃತ್ವದ ತನಿಖಾ ತಂಡ ಚುರುಕಾಗಿ ಕಾರ್ಯ ನಿರ್ವಹಿಸಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ನಡೆದ ಸರಣಿ ಜ್ಯುವೆಲ್ಲರಿ ಕಳ್ಳತನ ಪ್ರಕರಣಗಳಲ್ಲಿ ಗ್ಯಾಸ್ ಕಟ್ಟರ್ ಬಳಕೆಯಾಗಿತ್ತು. ಈ ಪ್ರಕರಣದಲ್ಲೂ ಗ್ಯಾಸ್ ಕಟ್ಟರ್ ಬಳಸಲಾಗಿದೆ. ಬಸದಿಯ ಹಿಂಬದಿಯಿಂದ ನುಗ್ಗಿ ವಿಗ್ರಹಗಳನ್ನು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದರು.
ಕಳ್ಳತನ ನಡೆದ ಸಂದರ್ಭದಲ್ಲಿ ಅಮೆರಿಕದಲ್ಲಿದ್ದ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು ತಮ್ಮ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿದ್ದರು. ಜೈನ ಬಸದಿಯ 15 ರತ್ನಖಚಿತ ವಿಗ್ರಹಗಳು ಕೊಹಿನೂರ್ ವಜ್ರಕ್ಕಿಂತ ಅಮೂಲ್ಯವಾದವು ಮತ್ತು ಅಷ್ಟೇ ಪವಿತ್ರವಾದವು ಎಂದು ಹೇಳಿದ್ದರು.
ಮಂದಿರದ ಬಲ ಬದಿಯ ಕಿಟಿಕಿಯ ಹೊರಭಾಗದ ಗ್ರಿಲ್ ನ ಸ್ವಲ್ಪ ಭಾಗವನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸಿ ಒಬ್ಬ ವ್ಯಕ್ತಿ ಸುಲಭವಾಗಿ ಒಳನುಗ್ಗಿ ಬಳಿಕ ಸಿಗುವ ಇನ್ನೊಂದು ಕಿಟಿಕಿಯ ಮೇಲ್ಭಾಗದ ಕಿಂಡಿಯ ಗ್ರಿಲ್ಸ್ ಅನ್ನು ಪೂರ್ಣವಾಗಿ ಕತ್ತರಿಸಿ ಒಳಗೆ ಕಳ್ಳ ಧುಮಿಕಿದ್ದಾನೆ.
ನೇರವಾಗಿ ಮೂರ್ತಿಗಳನ್ನಿಟ್ಟಿರುವ ಮಂದಿರದ ಕಬ್ಬಿಣದ ಶಟರ್ ಅನ್ನು ಗ್ಯಾಸ್ ಕಟ್ಟರಿನಿಂದ ಕತ್ತರಿಸಿ ಸುಮಾರು ನಾಲ್ಕು ಚದರಡಿಯ ಅವಕಾಶ ಮಾಡಿಕೊಂಡು ಒಳಗಿನ ದಪ್ಪಗಿನ ಗಾಜನ್ನು ಒಡೆದು ಒಳ ಪ್ರವೇಶಿಸಿ ಕಳ್ಳತನ ಮಾಡಲಾಗಿದೆ. ಒಳ ನುಗ್ಗಿದವನು ಒಬ್ಬನೇ ವ್ಯಕ್ತಿಯಾಗಿದ್ದು ಆತ ಒಳಗಿದ್ದ 8 ಸಿಸಿಟಿವಿ ಗಳ ಪೈಕಿ ಒಂದರಲ್ಲಿ ಆತನ ಚಹರೆ ಸ್ವಲ್ಪ ಮಟ್ಟಿಗೆ ಮಾತ್ರ ಗೋಚರವಾಗಿದೆ.
ಮುಸುಕುಧಾರಿ ದಢೂತಿ ವ್ಯಕ್ತಿ ಕೆಲವು ನಿಮಿಷಗಳ ಮಟ್ಟಿಗೆ ಚಾಲೂ ಇದ್ದ ಸಿಸಿ ಕ್ಯಾಮರಾ ತೋರಿಸಿದೆ. ಒಂದೊಂದೇ CCTV ಕ್ಯಾಮರಾಗಳ ಸಂಪರ್ಕ ತುಂಡರಿಸಿದ್ದು ಕೊನೆಯ ಕ್ಯಾಮರಾದಲ್ಲಿ ಒಂದಷ್ಟು ವಿವರಗಳು ದಾಖಲಾಗಿವೆ. ಇದೇ ಆಧಾರಿಸಿ ಶಂಕಿತ ವ್ಯಕ್ತಿಯ ಚಹರೆ ಬಿಡುಗಡೆಗೊಳಿಸಲಾಗಿತ್ತು.
ಚಿನ್ನದ ಚಂದ್ರನಾಥ (ಮುಕ್ಕಾಲು ಅಡಿ), ಚಿನ್ನದ ಪಂಚ ಪರಮೇಷ್ಟಿ (ಮುಕ್ಕಾಲು ಅಡಿ), ಚಿನ್ನದ ಪಾರ್ಶ್ವನಾಥ (5 ಇಂಚು),ಪಚ್ಚೆ ಕಲ್ಲಿನ ಪಾರ್ಶ್ವನಾಥ (ಒಂದು ಇಂಚು), ಗಜ ಮುತ್ತಿನ ಚಂದ್ರಪ್ರಭ , ಚಿನ್ನದ ಉಂಗುರದಲ್ಲಿ ಸಣ್ಣ ಮಹಾವೀರ, ಮಾಣಿಕ್ಯ ವಾಸು ಪೂಜ್ಯ, ನೀಲ ಕಲ್ಲಿನ 3 ಮೂರ್ತಿಗಳು (ಅರಿಹಂತ, ಮುನಿಸುವ್ರತ ಹಾಗೂ ನೇಮಿನಾಥ), ಚಿನ್ನದ ಮಂಟಪದ ಮುತ್ತಿನ ಬಾಹುಬಲಿ, ನೀಲ ಕಲ್ಲಿನ ಮಲ್ಲಿನಾಥ ಸ್ವಾಮಿ, ಸ್ಪಟಿಕದ ಮುನಿಸುವ್ರತ ಸ್ವಾಮಿ ಹಾಗೂ ವಜ್ರದ ಚಂದ್ರಪ್ರಭ (ಮೂರುವರೆ ಇಂಚು).












Click it and Unblock the Notifications