12 ವರ್ಷದಿಂದ ಜಗನ್ನಾಥನಿಗೆ ಕೈಮುಗಿಯುತ್ತಿರುವ ಮೋದಿ
ಅಹಮದಾಬಾದ್, ಜುಲೈ 10: ಮುಂದಿನ ಲೋಕಸಭೆ ಚುನಾವಣೆಗಾಗಿ ಬಿಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಿರಂತರವಾಗಿ 12 ವರ್ಷಗಳಿಂದ ಜಗನ್ನಾಥ ದೇವರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಹೀಗೆ 12 ವರ್ಷದಿಂದ ಪೂಜೆ ನೆರವೇರಿಸುತ್ತಿರುವ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಮೋದಿ ಅವರದ್ದಾಗಿದೆ.
ತನ್ನಿಮಿತ್ತ ಇಂದು 'ಪಹಿಂಡ್ ವಿಧಿ' ಎಂಬ ವಾರ್ಷಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದ ಮೋದಿ, ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಇದು 136ನೇ ಜಗನ್ನಾಥ ಪುರಿ ಯಾತ್ರೆಯಾಗಿದೆ. 'ಪಹಿಂಡ್ ವಿಧಿ' ಅಂದರೆ ಜಗನ್ನಾಥ ಸ್ವಾಮಿಯ ರಥೋತ್ಸವಕ್ಕೆ ದಾರಿಯನ್ನು ಶುದ್ಧಗೊಳಿಸುವ ಸಂಪ್ರದಾಯ/ ಆಚರಣೆ.
'ಪಹಿಂಡ್ ವಿಧಿ' ಸಂಪ್ರದಾಯ ಪಾಲನೆಯಾದ ಬಳಿಕ ಜಗನ್ನಾಥ ಸ್ವಾಮಿ, ಬಲದೇವ ಮತ್ತು ಅವರ ಸೋದರಿ ಸುಭದ್ರ ಮೆರವಣಿಗೆ ನೆರವೇರುತ್ತದೆ.

400 ವರ್ಷ ಹಳೆಯ ಜಗನ್ನಾಥ ದೇವಸ್ಥಾನ
ತತ್ಸಂಬಂದ, ಸಿಎಂ ಮೋದಿ ಅವರು ರಾಜಧಾನಿ ಅಹಮದಾಬಾದಿನಲ್ಲಿ ಜಮಾಲಪುರ ಬಡಾವಣೆಯಲ್ಲಿರುವ 400 ವರ್ಷಗಳಷ್ಟು ಹಳೆಯದಾದ ಜಗನ್ನಾಥ ದೇವಸ್ಥಾನಕ್ಕೆ ಇಂದು ಬುಧವಾರ ಭೇಟಿ ನೀಡಿದರು. ಬೋಧ್ ಗಯಾದಲ್ಲಿ ಮೊನ್ನೆ ನಡೆದ ಬಾಂಭ್ ದಾಳಿಯ ಹಿನ್ನೆಲೆಯಲ್ಲಿ ಈ ಬಾರಿ ಜಗನ್ನಾಥ ರಥಯಾತ್ರೆಗೆ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.

ಮಹಾಂತ ದಿಲೀಪ್ ದಾಸ್ ಮಹಾರಾಜರ ಆಶೀರ್ವಾದ
ಈ ದೇವಸ್ಥಾನದಿಂದಲೇ ರಥ ಮೆರವಣಿಗೆ ಹೊರಡುವುದು. ಇದೇ ಸಂದರ್ಭದಲ್ಲಿ, ರಥೋತ್ಸವದ ನೇತೃತ್ವ ವಹಿಸುವ ಮಹಾಂತ ದಿಲೀಪ್ ದಾಸ್ ಮಹಾರಾಜ್ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆದರು. ಶಾಂತಿ, ಸೌಹಾರ್ಧತೆ, ಉತ್ತಮ ಬಾಂಧವ್ಯವನ್ನು ಬೇಡುತ್ತಾ ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವುದಾಗಿ ಮೋದಿ ಇದೇ ವೇಳೆ ಹೇಳಿದರು.

'ಜೈಂ ರಾಂಛೋದ್, ಮಖಾನ್ ಚೋರ್'
ಅಹಮದಾಬಾದಿನ ಬಹುತೇಕ ರಸ್ತೆಗಳು ಜಗನ್ನಾಥ ರಥೋತ್ಸವಕ್ಕಾಗಿ ತಳಿರು ತೋರಣಗಳಿಂದ ಅಲಂಕೃತಗೊಂಡಿದೆ. 'ಜೈಂ ರಾಂಛೋದ್, ಮಖಾನ್ ಚೋರ್' ಎಂಬ ಘೋಷಣೆಗಳು ಎಲ್ಲೆಲ್ಲೂ ಮೊಳಗುತ್ತಿವೆ. ರಾಜ್ಯ, ದೇಶಾದ್ಯಂತ ಎಲ್ಲೆಡೆಯಿಂದ ಆಗಮಿಸಿರುವ ಸಾಧು ಸಂತರು ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅಹಮದಾಬಾದ್ ಅಲ್ಲದೆ ರಾಜ್ಯದ ಇನ್ನೂ 140 ಸ್ಥಳಗಳಲ್ಲಿ ಜಗನ್ನಾಥ ರಥೋತ್ಸವ ನೆರವೇರಲಿದೆ.

ಜಗನ್ನಾಥ ಬಡವರ ದೇವರು
ಜಗನ್ನಾಥ ಬಡವರ ದೇವರು. ಇಲ್ಲಿನ ಬಡ ಜವಳಿ ಗಿರಣಿ ಕಾರ್ಮಿಕರು ಜಗನ್ನಾಥ ದೇವರು ಶ್ರಮವಿಸಿ ದುಡಿಯುತ್ತಾ ಬಂದ ಪರಿಣಾಮ ಇಂದು ಜವಳಿ ಕ್ಷೇತ್ರದಲ್ಲಿ ಅಹಮದಾಬಾದಿಗೆ ವಿಶೇಷ ಸ್ಥಾನ-ಮಾನ ಪ್ರಾಪ್ತಿಯಾಗಿದೆ ಎಂದು ಮೋದಿ ಅವರು ತಮ್ಮ ಬ್ಲಾಗಿನಲ್ಲಿ ತಿಳಿಸಿದ್ದಾರೆ.

ಒರಿಸ್ಸಾದ ಪುರಿ ಜಗನ್ನಾಥ ರಥಯಾತ್ರೆ ಬಿಟ್ಟರೆ
ಒರಿಸ್ಸಾದ ಪುರಿ ಜಗನ್ನಾಥ ರಥಯಾತ್ರೆ ಬಿಟ್ಟರೆ ಆಷಾಢ ಶುಕ್ಲ ಪಕ್ಷದ ಎರಡನೆಯ ದಿನ (ಬಿದಿಗೆ) ಅಹಮದಾಬಾದಿನಲ್ಲಿ ನಡೆಯುವ ಈ ಆಚರಣೆಗೆ ವಿಶೇಷ ಮಹತ್ವವಿದೆ. ಮೊದಲು ಜಗನ್ನಾಥನತ್ತ ಮುಖ ಮಾಡಿ, ದೇವರ ದರ್ಶನ ಪಡೆಯುವ ಆನೆಗಳು 14 ಕಿಮೀ ಉದ್ದ ರಥವನ್ನು ಎಳೆಯುತ್ತವೆ. ಮೋದಿ ಸಹ ರಥ ಎಳೆಯುವುದಕ್ಕೆ ಕೈಜೋಡಿಸುತ್ತಾರೆ.












Click it and Unblock the Notifications