ಮಂಡ್ಯ : ಬೆಂಗಳೂರು-ಮೈಸೂರು ರಸ್ತೆಯಲ್ಲಿ ಫ್ಲೈಓವರ್

ಮಂಡ್ಯದಲ್ಲಿ ಈ ಯೋಜನೆ ಕುರಿತು ಮಾಹಿತಿ ನೀಡಿದ ವಸತಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ಮಂಡ್ಯ ನಗರದಲ್ಲಿ ಬೆಂಗಳೂರು-ಮೈಸೂರು ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ಕಡಿಮೆ ಮಾಡಲು ಫ್ಲೈ ಓವರ್ ನಿರ್ಮಿಸಲು ಚಿಂತಿಸಲಾಗಿದೆ ಎಂದರು.
ಉಮ್ಮಡಹಳ್ಳಿ ಗೇಟ್ ನಿಂದ ಸಿದ್ದಯ್ಯನ ಕೊಪ್ಪಲುವರೆಗೆ ಏಳು ಕಿ.ಮೀ. ಮಾರ್ಗದಲ್ಲಿ ಫ್ಲೈ ಓವರ್ ನಿರ್ಮಿಸಲು ಜಿಲ್ಲಾಡಳಿತ ಯೋಜನೆ ಸಿದ್ಧಗೊಳಿಸಿದೆ. ಶೀಘ್ರದಲ್ಲೇ ಇದರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಅಂಬರೀಶ್ ತಿಳಿಸಿದರು.
ಈ ಯೋಜನೆಗೆ 317 ಕೋಟಿ ಅನುದಾನ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈ ಕುರಿತು ಮಾತುಕತೆ ನಡೆಸಿದ್ದು, ಬಜೆಟ್ ನಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅಂಬರೀಶ್ ತಿಳಿಸಿದರು.
ಯೋಜನೆ ಬೇರೆ ಇತ್ತು : ಮಂಡ್ಯ ನಗರದ ಸುತ್ತಲೂ ರಿಂಗ್ ರೋಡ್ ನಿರ್ಮಿಸುವ ಆಲೋಚನೆ ಇತ್ತು. ಆದರೆ, ನಗರದ ಸುತ್ತಲೂ ಕೃಷಿಯೋಗ್ಯ ಭೂಮಿ ಇದ್ದು, ರಿಂಗ್ ರೋಡ್ ನಿರ್ಮಿಸಲು ರೈತರ ಜಮೀನು ವಶಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಫ್ಲೈ ಓವರ್ ನಿರ್ಮಾಣ ಯೋಜನೆ ರೂಪಿಸಲಾಗಿದೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಮಂಡ್ಯವನ್ನು ವಾಹನಗಳು ಕ್ರಮಿಸಲು ಒಂದು ಗಂಟೆಗೂ ಹೆಚ್ಚುಕಾಲ ಬೇಕಾಗುತ್ತದೆ. ಆದ್ದರಿಂದ ಫ್ಲೈ ಓವರ್ ನಿರ್ಮಾಣ ಅಗತ್ಯವಾಗಿದೆ ಎಂದು ಅಂಬರೀಶ್ ವಿಶ್ಲೇಷಿಸಿದರು. (ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ?)
ಮತ್ತಷ್ಟು ಫ್ಲೈ ಓವರ್ : ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಸಾಗುವ ರಾಮನಗರ, ಚನ್ನಪಟ್ಟಣದಲ್ಲೂ ಫ್ಲೈ ಓವರ್ ನಿರ್ಮಿಸಲು ಯೋಜನೆ ತಯಾರಿಸಲಾಗುತ್ತಿದೆ. ಆದರೆ, ಮಂಡ್ಯ ಜಿಲ್ಲೆಯ ಫ್ಲೈ ಓವರ್ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications