ಇನ್ಫಿ ಮೂರ್ತಿ ಟೀಂನಿಂದ ಪ್ರಮುಖ ವ್ಯಕ್ತಿ ಔಟ್
ಬೆಂಗಳೂರು, ಜು.10: ಎನ್ ಆರ್ ನಾರಾಯಣ ಮೂರ್ತಿ ಅವರು ಮತ್ತೆ ಇನ್ಫೋಸಿಸ್ ಸೇರಿದ ಮೇಲೆ ಇದೇ ಮೊದಲ ಬಾರಿಗೆ ಪ್ರಮುಖ ಸದಸ್ಯರೊಬ್ಬರು ಇನ್ಫಿ ತೊರೆದಿದ್ದಾರೆ.
ಇನ್ಫೋಸಿಸ್ ನ ಗ್ಲೋಬರ್ ಸೇಲ್ಸ್ ಹಾಗೂ ಮಾರ್ಕೆಟಿಂಗ್ ಮುಖ್ಯಸ್ಥರಾಗಿದ್ದ ಬಾಸಾಬ್ ಪ್ರಧಾನ್ ಅವರು ತಮ್ಮ ರಾಜೀನಾಮೆ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮಂಗಳವಾರ ಹೇಳಿಕೊಂಡಿದ್ದಾರೆ. ಇನ್ಫೋಸಿಸ್ ತೊರೆದ ಮೇಲೆ ಹೊಸ ಕಂಪನಿ ಆರಂಭಿಸುವ ಸುಳಿವು ನೀಡಿದ್ದಾರೆ. 2011ರಲ್ಲಿ ಇನ್ಫೋಸಿಸ್ ಸೇರಿದ್ದ ಪ್ರಧಾನ್ ಅವರು 2 ವರ್ಷಗಳಲ್ಲೇ ಇನ್ಫೋಸಿಸ್ ತೊರೆಯುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ಫೋಸಿಸ್ ನ ಕಾರ್ಯಕಾರಿ ಸಮಿತಿಯ ಮುಖ್ಯ ಸದಸ್ಯರಾಗಿದ್ದ ಪ್ರಧಾನ್, ಇನ್ಫೋಸಿಸ್ ಸಂಸ್ಥೆಯ ಜಾಗತಿಕ ಉದ್ಯಮ ತಂತ್ರಗಾರಿಕೆಯ ಯೋಜನೆ ನಿರೂಪಿಸುವ ಮಹತ್ವದ ಪಾತ್ರ ಕೂಡಾ ವಹಿಸುತ್ತಿದ್ದರು.

ಇನ್ಫೋಸಿಸ್ ನ ಮುಖ್ಯ ಕಾರ್ಯಕಾರಿ ಅಧಿಕಾರಿ(ಸಿಇಒ) ಎಸ್ ಡಿ ಶಿಬುಲಾಲ್ ಅವರ ಆಪ್ತ ಎಂದೇ ಪ್ರಧಾನ್ ಗುರುತಿಸಿಕೊಂಡಿದ್ದರು. ಇನ್ಫೋಸಿಸ್ 3.0 ಅಳವಡಿಕೆಯಲ್ಲಿ ಪ್ರಧಾನ್ ಮುಖ್ಯ ಪಾತ್ರವಹಿಸುವ ನಿರೀಕ್ಷೆಯಿತ್ತು.
ಇತ್ತೀಚೆಗೆ ನಡೆದ 32ನೇ ವಾರ್ಷಿಕ ಪ್ರಧಾನ ಸದಸ್ಯರ ಸಭೆಯಲ್ಲಿ ಮಾತನಾಡಿದ ನಾರಾಯಣ ಮೂರ್ತಿ ಅವರು, 'ಜಾಗತಿಕ ಕನ್ಸಲ್ಟಿಂಗ್ ಕ್ಷೇತ್ರದಲ್ಲಿ ಇನ್ಫೋಸಿಸ್ ಮತ್ತೆ ತನ್ನ ಹಿಂದಿನ ಯಶಸ್ಸನ್ನು ಗಳಿಸಬೇಕು' ಎಂದಿದ್ದರು. ಹೀಗಾಗಿ ಪ್ರಧಾನ್ ಅವರ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆ ಇತ್ತು ಎನ್ನಲಾಗಿದೆ.
ಇನ್ಫೋಸಿಸ್ ಗೆ ಬಂದು ಹೋಗಿ ಮಾಡುತ್ತಿದ್ದ ಪ್ರಧಾನ್ 2002ರಲ್ಲಿ ಫಣೀಶ್ ಮೂರ್ತಿ ಜಾಗತಿಕ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶಕರಾಗಿದ್ದ ಕಾಲದಲ್ಲಿ ಇನ್ಫಿ ಸೇರಿದ್ದರು. ಫಣೀಶ್ ಮೂರ್ತಿ ಅವರು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಿಲುಕಿ ಇನ್ಫೋಸಿಸ್ ತೊರೆಯಬೇಕಾಯಿತು.
2005ರಲ್ಲಿ ಪ್ರಧಾನ್ ಇನ್ಫೋಸಿಸ್ ತೊರೆದಿದ್ದರು. ಗ್ರಿಡ್ ಸ್ಟೋನ್ ರಿಸರ್ಚ್ ಎಂಬ ಸಂಸ್ಥೆ ಆರಂಭಿಸಿದ ಪ್ರಧಾನ್ 2010ರಲ್ಲಿ ಕಂಪನಿ ಮುಚ್ಚಿದ್ದರು. ನಂತರ ಮತ್ತೆ 2011ರಲ್ಲಿ ಇನ್ಫೋಸಿಸ್ ಸೇರಿದ್ದರು.
ಏಪ್ರಿಲ್ 16,2012 ರಲ್ಲಿ HR ವಿಭಾಗದ ಮುಖ್ಯಸ್ಥ ಟಿ.ವಿ ಮೋಹನ್ ದಾಸ್ ಪೈ, ತೀರಾ ಇತ್ತೀಚೆಗೆ ಬಿಪಿಒ ವಿಭಾಗದ ಸಿಇಒ ರಿತೇಶ್ ಇದ್ನಾನಿ ತೊರೆದ ಮೇಲೆ ಈಗ ಪ್ರಧಾನ್ ಸಂಸ್ಥೆ ಬಿಡುತ್ತಿರುವುದು ದೊಡ್ಡ ಹೊಡೆತ ಎನ್ನಬಹುದು. ಅಂದ ಹಾಗೆ, ಜು.12 ರಂದು ಇನ್ಫೋಸಿಸ್ ತನ್ನ ತ್ರೈಮಾಸಿಕ ವರದಿಯನ್ನು ಪ್ರಕಟಿಸಲಿದೆ.












Click it and Unblock the Notifications