ಬಿಎಸ್ವೈ ಮರಳಿ ಬನ್ನಿ ಎಂದ ನಾಯಕರ ಬಾಯಿಗೆ ಬೀಗ!

ನವದೆಹಲಿಯಲ್ಲಿ ಸೋಮವಾರ ಹೇಳಿಕೆ ನೀಡಿರುವ ರಾಜನಾಥ್ ಸಿಂಗ್ ಯಡಿಯೂರಪ್ಪ ಪಕ್ಷಕ್ಕೆ ಮರಳುವ ವಿಚಾರವನ್ನು ಶೀಘ್ರದಲ್ಲೇ ತೀರ್ಮಾನಿಸಲಾಗುವುದು. ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಈ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೆ ಯಾವುದೇ ನಾಯಕರು ಹೇಳಿಕೆ ನೀಡಬಾರದು ಎಂದು ಸಂದೇಶ ನೀಡಿದ್ದಾರೆ.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯಡಿಯೂರಪ್ಪ ಮರು ಸೇರ್ಪಡೆ ಕುರಿತು ಹಲವಾರಿ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ನಿರ್ಧಾರ ಹೊರ ಬೀಳುವ ವರೆಗೆ ಯಾವುದೇ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸಂಸದರು ದೆಹಲಿಯಲ್ಲಿ : ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಲು ರಾಜ್ಯದ ಸಂಸದರ ತಂಡ ದೆಹಲಿಗೆ ತೆರಳಿರುವ ದಿನವೇ ರಾಜನಾಥ್ ಸಿಂಗ್ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ. ಮಾಜಿ ಸಿಎಂ ಸದಾನಂದಗೌಡ ನೇತೃತ್ವದ ಸಂಸದರ ನಿಯೋಗ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಇಂದು ಸಂಜೆ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.
ಸಂಸದರಾದ ಡಿ.ಬಿ.ಚಂದೇಗೌಡ, ಮಾಜಿ ಸಚಿವರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ನಾಯಕರು ದೆಹಲಿಗೆ ತೆರಳಿದ್ದು, ಇಂದು ಸಂಜೆ ಬಿಜೆಪಿ ರಾಜ್ಯ ಉಸ್ತುವಾರಿ ಥಾವರ್ ಚಂದ್ ಗೆಹ್ಲೋಟ್ ಮತ್ತು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತಕತೆ ನಡೆಸಲಿದ್ದಾರೆ.
ಚಂದ್ರೇಗೌಡ ನಿವಾಸದಲ್ಲಿ ಸಭೆ : ರಾಜ್ಯದಿಂದ ತೆರಳಿರುವ ಸಂದಸದ ತಂಡ ಸೋಮವಾರ ಬೆಳಗ್ಗೆ ಸಂಸದ ಡಿ.ಬಿ.ಚಂದ್ರೇಗೌಡ ಅವರ ನಿವಾಸದಲ್ಲಿ ಸಭೆ ಸೇರಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುವ ಕುರಿತು ಚರ್ಚಿಸಿದರು. ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ಸಹ ನಡೆಯಲಿದ್ದು, ಸಭೆಯ ನಂತರ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ತೀರ್ಮಾನಿಸಿದರು.
ನೋ ಎಂದಿರುವ ಅಡ್ವಾಣಿ : ಬಿ.ಎಸ್.ಯಡಿಯೂರಪ್ಪ ಪಕ್ಷ ಮರು ಸೇರ್ಪಡೆ ಬಗ್ಗೆ ಚರ್ಚಿಸಲು ಬರುವ ಸಂಸದರಿಗೆ ಅಡ್ವಾಣಿ ನೋ ಎಂದಿದ್ದಾರೆ. ರಾಜ್ಯ ಸಂಸದರ ನಿಯೋಗ ಅಡ್ವಾಣಿ ಅವರನ್ನು ಭೇಟಿ ಮಾಡಲು ಅವರು ಸಮಯಾವಕಾಶವನ್ನೇ ನೀಡಿಲ್ಲ. ಬಿಎಸ್ವೈ ಪಕ್ಷ ಮರು ಸೇರ್ಪಡೆ ಕುರಿತು ರಾಜನಾಥ್ ಸಿಂಗ್ ಜೊತೆ ಚರ್ಚಿಸಿ ಎಂದು ಶನಿವಾರವೇ ಸ್ಪಷ್ಟ ಪಡಿಸಿದ್ದಾರೆ.(ಬಿಎಸ್ವೈ ಬಗ್ಗೆ ಮಾತನಾಡಲು ಸಮಯವಿಲ್ಲ : ಅಡ್ವಾಣಿ)












Click it and Unblock the Notifications