ಕಾರು ಡಿಕ್ಕಿ ಒಂದೇ ಕುಟುಂಬದ ಮೂವರ ಸಾವು

ಜೈನ್ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ದಕ್ಷಿಣಮೂರ್ತಿ (45), ಇವರ ಪತ್ನಿ ನಾಗವೇಣಿ (35) ಹಾಗೂ ಮಗಳು ಐಶ್ವರ್ಯಾ (14) ಮೃತ ದುರ್ದೈವಿಗಳು.
ಭಾನುವಾರ ತಡರಾತ್ರಿ ಮೂವರು ಪದ್ಮನಾಭನಗರದಿಂದ ಯಲಚೇನಹಳ್ಳಿಯ ತಮ್ಮ ನಿವಾಸಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದಾಗ, ಸಾರಕ್ಕಿ ಜಂಕ್ಷನ್‌ನ ಇಲಿಯಾಸ್ ನಗರದ ಬಳಿ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಘಟನೆ ಏನು : ಭಾನುವಾರ ರಜೆ ಇದ್ದ ಕಾರಣ ಬೆಳಗ್ಗೆ ನಾಗವೇಣಿ ಅವರು, ತಮ್ಮ ತವರು ಮನೆ ಪದ್ಮನಾಭನಗರಕ್ಕೆ ಪತಿ ದಕ್ಷಿಣಮೂರ್ತಿ ಮತ್ತು ಮಗಳು ಐಶ್ವರ್ಯಾ ಜತೆ ಬಂದಿದ್ದರು.
ಸೋಮವಾರ ಬೆಳಗ್ಗೆ ಐಶ್ವರ್ಯಾ ಶಾಲೆಗೆ ಹೋಗಬೇಕಾದ್ದರಿಂದ ದಂಪತಿಗಳು ಭಾನುವಾರ ರಾತ್ರಿ ಊಟ ಮುಗಿಸಿ ಯಲಚೇನಹಳ್ಳಿಯಲ್ಲಿರುವ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಆಗ ಒನ್‌ವೇನಲ್ಲಿ ಬಂದ ಝೆನ್ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಸ್ಥಳದಲ್ಲೇ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಕಾರಿನಲ್ಲಿ ಮದ್ಯದ ಬಾಟಲಿಗಳು ದೊರಕಿದ್ದು, ಚಾಲಕ ಪಾನಮತ್ತನಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರು ಚಾಲಕನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications