ಗಬ್ಬುನಾತದ ಸಾಧುವನ್ನು ಟ್ರೈನಿನಿಂದ ಹೊರಹಾಕಿದರು!

ಶನಿವಾರ ಈ ಘಟನೆ ನಡೆದಿದೆ. ವಯಸ್ಸಾದ ಸಾಧು ಟ್ರೈನ್ ಹತ್ತುತ್ತಿದ್ದಂತೆ ದುರ್ಗಂಧ ಬೀರಿದೆ. ಪ್ರಯಾಣಿಕರು ಮೂಗು ಹಿಡಿದುಕೊಂಡೇ 'ಮೊದಲು ಕೆಳಗಿಳಿದು ಹೋಗೋ ಮಾರಾಯ' ಎಂದು ಅಂಗಾಲಾಚಿದ್ದಾರೆ. ಆದರೆ ಸೆಟೆದು ನಿಂತ ಸ್ವಾಮೀಜಿ ಇನ್ನೂ ಮೊಂಡಾಟ ನಡೆಸಿದ್ದಾನೆ. ಒಂದೊಂದಾಗಿ ತನ್ನ ಬಟ್ಟೆಗಳನ್ನು ಕಳಚಿ, ಟ್ರೈನಿನಲ್ಲಿದ್ದ ಕಂಬಿಗಳ ಸುತ್ತ ಹರಡಿದ್ದಾನೆ. ಕೊನೆಗೆ ಒಳ ಉಡುಪನ್ನೂ ತೆಗೆದು ಹರಡಿದ್ದಾನೆ.
ಆಗ ಜನ ರೋಸಿಹೋಗಿದ್ದಾರೆ. ಕಂಪಾರ್ಟ್ ಮೆಂಟಿನಲ್ಲಿ ಒಂದಷ್ಟು ಹೆಣ್ಣು ಮಕ್ಕಳೂ ಇದ್ದರು. ಕೂಗಾಡುತ್ತಾ ಜನ ಗಲಾಟೆ ಮಾಡತೊಡಗಿದ್ದಾರೆ. ಆದರೆ ಆಸಾಮಿ ಫಸ್ಟ್ ಕ್ಲಾಸ್ ರೈಲ್ವೆ ಟಿಕೆಟ್ ತೆಗೆದು, 'ನೀವ್ಯಾರೂ ಏನೂ ಕಿಸಿಯುವುದಕ್ಕಾಗುವುದಿಲ್ಲ' ಎಂದು ಜಬರದಸ್ತು ಮಾಡಿದ್ದಾನೆ. ಜನ ನಿಜಕ್ಕೂ ಪೀಕಲಾಟಕ್ಕೆ ಇಟ್ಟುಕೊಂಡಿದ್ದಾರೆ; ಕೆಲ ಕಾಲ ಧರ್ಮಸಂಕಟದಲ್ಲಿ ತೊಳಲಾಡಿದ್ದಾರೆ.
ಆದರೆ ಮೂಗು, ಮೆದುಳು ಕೇಳಬೇಕಲ್ಲಾ? ಕೆಲವರು ಧೈರ್ಯ ತಂದುಕೊಂಡು ಸಾಧುನನ್ನು ಹೊರಹಾಕಲು ನಿರ್ಧರಿಸಿದ್ದಾರೆ. ಕೆಳಗಿಳಿಸಿದ ಬಳಿಕ ಆತನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ ಸಾಧು ಬಳಿ ಅರ್ಹ ಟಿಕೆಟ್ ಇತ್ತಾದ್ದರಿಂದ ಪೊಲೀಸರು ಅಸಹಾಯಕರಾಗಿ, ಆತನನ್ನು ಹಾಗೆಯೇ ಬಿಟ್ಟುಕಳಿಸಿದ್ದಾರೆ. ಅಷ್ಟೇ ಅಲ್ಲ ಅವನನ್ನು ಕರೆತಂದ ಪ್ರಯಾಣಿಕರನ್ನುದ್ದೇಶಿಸಿ 'ನೀವೇ ಅಲ್ಲೇ ಟ್ರೈನಿನಲ್ಲೇ ಅವನಿಗೆ ಸಮಾ ನಾಲ್ಕು ಬಾರಿಸಬೇಕಿತ್ತು' ಎಂದು ಬಿಟ್ಟಿ ಸಲಹೆ ನೀಡಿ ಕಳಿಸಿದ್ದಾರೆ.












Click it and Unblock the Notifications