ಮಗನ ಆಕಸ್ಮಿಕ ಸಾವು, ಪತ್ನಿಯ ಹತ್ಯೆಗೈದ ಪತಿರಾಯ

ಆಗ್ರಾ ಸಮೀಪದ ಪತ್ಸಾಲ್ ಗ್ರಾಮದಲ್ಲಿ 8 ವರ್ಷದ ಕಂದ ತನ್ನ ತಾಯಿಯ ಜತೆ ಊರಿನ ಹೊರಗಡೆಯಿದ್ದ ದೇವಸ್ಥಾನಕ್ಕೆಂದು ನಡೆದುಹೋಗುತ್ತಿದ್ದ. ಸಮೀಪದಲ್ಲೇ ಹರಿಯುತ್ತಿದ್ದ ನೀರಿನ ಕಾಲುವೆ ಕಂಡಿದ್ದಾನೆ. ನೀರಲ್ಲಿ ಆಡುವ ಮನಸಾಗಿ, ಅಮ್ಮನತ್ತ ಆಸೆಗಣ್ಣುಗಳಿಂದ ನೋಡಿದ್ದಾನೆ. ಸರಿ ಮಗ ಆಸೆ ಪಡ್ತಿದ್ದಾನಲ್ಲಾ ಎಂದು ಅಮ್ಮ ಅವನ ಕೈಬಿಟ್ಟಿದ್ದಾಳೆ. ಅಷ್ಟೇ...
ನೀರಿಗಿಳಿದ ಮಗ ಕಾಲುವೆಯಲ್ಲಿ ನೀರಿನ ಸೆಳೆತ ಜೋರಾಗಿ ಅಮ್ಮನ ಕೈತಪ್ಪಿದ್ದಾನೆ. ನೋಡ ನೋಡುತ್ತಿದ್ದಂತೆ ಅಮ್ಮನ ಕಣ್ಣೆದುರೇ ನೀರಿನಲ್ಲಿ ಮುಳಗಲಾರಂಭಿಸಿದ್ದಾನೆ. ತಾಯಿ ಕರುಳು ಕಂದನ ರಕ್ಷಣೆಗಾಗಿ ಜೋರಾಗಿ ಕಿರುಚಿದೆ. ಆದರೆ ಬಟಾಬಯಲಿನಲ್ಲಿ ಯಾರೂ ಇರಲಿಲ್ಲ.
ಆನಂತರ ಯಾರೋ ಬಂದರು ಅನ್ನಿ. ಮಗುವನ್ನು ನೀರಿನಿಂದ ಹೊರಹಾಕಿ, ಆಸ್ಪತ್ರೆಗೂ ಸೇರಿಸಿದ್ದಾರೆ. ಆದರೆ ಮಗು ನೀರಿನಲ್ಲಿ ಉಸಿರುಗಟ್ಟಿ ಸತ್ತಿದೆ ಎಂದು ಡಾಕ್ಟರು ಹೇಳಿದ್ದಾರೆ. ಇತ್ತ ವಿಷಯ ತಿಳಿದು ಆಸ್ಪತ್ರೆಗೆ ಒಡೋಡಿ ಬಂದ ಅಪ್ಪನಿಗೆ ಮಗನ ಶವವನ್ನು ನೋಡಿ ಆಘಾತವಾಗಿದೆ.
ಮಗನ ಶವದೊಂದಿಗೆ ಮನೆಗೆ ಹೋದವನೆ ಮನೆ ಮುಂದೆ ಪುತ್ರನನ್ನು ಮಲಗಿಸಿ, ಒಳಹೋಗಿದ್ದಾನೆ. ಮಗನ (ಸೌರಭ್) ಶವ ನೋಡಲು ಹೊರಬಂದ ಪತ್ನಿಯನ್ನು (ಸುನೀತಾ ದೇವಿ) ಕಂಡು ಆತನಲ್ಲಿ ಆಕ್ರೋಶ ಹೆಚ್ಚಾಗಿದೆ. ತನ್ನ ಮುದ್ದಾದ ಮಗನ ಸಾವಿಗೆ ಇವಳೂ/ಇವಳ ನಿರ್ಲಕ್ಷ್ಯವೇ ಕಾರಣವೆಂದು ನಿರ್ಧರಿಸಿದ ಪತಿರಾಯ (ಮುಕೇಶ್), ಮನೆಯೊಳಗಿಂದ ಪಿಸ್ತೂಲು ತಂದು ನೇರವಾಗಿ ಪತ್ನಿಗೆ ಗುಂಡಿಟ್ಟು ಆಕೆಯನ್ನೂ ಪುತ್ರನ ಜತೆ ಪರಲೋಕಕ್ಕೆ ಕಳಿಸಿಕೊಟ್ಟಿದ್ದಾನೆ.












Click it and Unblock the Notifications