ಕುಡುಕ ಮಗನನ್ನು ಬಡಿದು ಕೊಂದ ತಂದೆ-ತಾಯಿ!

ಚಿಕ್ಕಬಳ್ಳಾಪುರ ಜಿಲ್ಲೆಯ, ಚಿಂತಾಮಣಿ ತಾಲೂಕಿನ ವಡ್ಡಳ್ಳಿ ಗ್ರಾಮದ ಯುವಕ ಚಂದ್ರಶೇಖರ್ (25) ಕೊಲೆಯಾದ ದುರ್ದೈವಿ. ಸೋಮವಾರ ಬೆಳಗ್ಗೆ ತಂದೆ-ತಾಯಿ ದೊಣ್ಣೆಯಿಂದ ಬಡಿದು ಚಂದ್ರಶೇಖರ್ ಅವರನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಏನು : ವಡ್ಡಳ್ಳಿ ಗ್ರಾಮದ ನಿವಾಸಿಗಳಾದ ಅಶ್ವಥ್ ರೆಡ್ಡಿ ಮತ್ತು ನಾಗರತ್ನ ದಂಪತಿಗೆ ಇಬ್ಬರು ಗಂಡು ಮಕ್ಕಳು. ಮೊದಲನೇ ಮಗ, ಕೆಲಸ ಮಾಡುತ್ತಾ ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಾನೆ. ಆದರೆ, ಎರಡನೇ ಮಗ ಕೊಲೆಯಾದ ಚಂದ್ರಶೇಖರ್ ಕುಡುಕ.
ಕೆಲಸಕ್ಕೆ ಸರಿಯಾಗಿ ಹೋಗುವುದಿಲ್ಲ, ಒಂದು ದಿನ ಕೆಲಸಕ್ಕೆ ಹೋದರೆ, ಆ ದುಡ್ಡನಲ್ಲಿ ಕುಡಿದು ಮನೆಗೆ ಮರಳುತ್ತಾನೆ. ನಿತ್ಯವೂ ಕಂಠಪೂರ್ತಿ ಕುಡಿದು ಬರುವ ಈತ ತಂದೆ ತಾಯಿಯ ಬಳಿ ಹಣ ಕೇಳುತ್ತಿದ್ದ. ಹಣ ನೀಡದಿದ್ದರೆ, ಇಬ್ಬರಿಗೂ ಹೊಡೆಯುತ್ತಿದ್ದ.
ಭಾನುವಾರ ರಾತ್ರಿಯೂ ಈತ ಕುಡಿದು ಮನೆಗೆ ಬಂದಿದ್ದಾನೆ. ಹಣಕ್ಕಾಗಿ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ದೊಣ್ಣೆ ತೆಗೆದುಕೊಂಡು ತಂದೆ ಅಶ್ವಥ್ ರೆಡ್ಡಿ ಮತ್ತು ತಾಯಿ ನಾಗರತ್ನ ಮಗ ಚಂದ್ರದೇಶಖರನಿಗೆ ಸರಿಯಾಗಿ ಹೊಡೆದಿದ್ದಾರೆ. ತಲೆಗೆ ಪೆಟ್ಟು ಬಿದ್ದಿದ್ದರಿಂದ ಆತ ಮೃತಪಟ್ಟಿದ್ದಾನೆ.
ಸೋಮವಾರ ಬೆಳಗ್ಗೆ ಸ್ಥಳೀಯರ ಬಳಿ ದಂಪತಿಗಳು ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಸ್ಥಳೀಯರು ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications