ಬಿಎಂಟಿಸಿ ಬಸ್ ದರ ಏರಿಕೆ ವಿರುದ್ಧ ಸಿಡಿದೆದ್ದ ಪ್ರಯಾಣಿಕ
ಬೆಂಗಳೂರು, ಜೂ. 28 : ಪೆಟ್ರೋಲ್, ಡೀಸೆಲ್ ತುಟ್ಟಿಯಾಗುತ್ತಿರುವುದರಿಂದ ಬೆಂಗಳೂರಿನ ಬಹುಪಾಲು ಬಡ ಮತ್ತು ಮಧ್ಯಮವರ್ಗದ ಜನತೆ ಬಿಎಂಟಿಸಿ ಬಸ್ಸನ್ನೇ ಅವಲಂಬಿಸಿದ್ದಾರೆ. ಆದರೆ, ಇತ್ತೀಚೆಗೆ ಬಿಎಂಟಿಸಿ ಬಸ್ ಪ್ರಯಾಣ ದರ ಮತ್ತು ಮಾಸಿಕ ಹಾಗು ದೈನಂದಿನ ಪಾಸ್ ಬೆಲೆಯನ್ನು ಹೆಚ್ಚಿಸಿದ್ದರಿಂದ ಗತ್ಯಂತರವಿಲ್ಲದೆ ಬೈದಾಡಿಕೊಳ್ಳುತ್ತ ಬಸ್ ಹತ್ತುತ್ತಿದ್ದಾರೆ.
ಆದರೆ, ಬೃಹತ್ ಬೆಂಗಳೂರು ಸಾರಿಗೆ ಸಂಸ್ಥೆಯ ವಿರುದ್ಧ ಕಡೆಗೂ ಬಸ್ ಪ್ರಯಾಣಿಕರು ತಿರುಗಿಬಿದ್ದಿದ್ದಾರೆ. ಬಸ್ ಪ್ರಯಾಣ ದರ ಏರಿಕೆ, ಬಸ್ ನಿಲ್ದಾಣಗಳಲ್ಲಿ ಇರುವ ಅವ್ಯವಸ್ಥೆ, ಹಣ ಪಡೆದೂ ಅನುಕೂಲ ಕಲ್ಪಿಸದಿರುವುದನ್ನು ವಿರೋಧಿಸಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಶುಕ್ರವಾರದಿಂದ ವ್ಯಾಪಕ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ.
ಬಸ್ ಪ್ರಯಾಣ ದರ ಏರಿಕೆ ಮಾಡಿ ಬಿಎಂಟಿಸಿ ಬಡವರು ಮತ್ತು ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಸಾಮಾನ್ಯ ಬಸ್ಸುಗಳ ಬದಲಾಗಿ ವೊಲ್ವೋದಂಥ ದುಬಾರಿ ಬಸ್ಸುಗಳೇ ಹೆಚ್ಚಾಗಿ ಓಡಾಡುತ್ತಿರುವುದರಿಂದ ಅನಿವಾರ್ಯವಾಗಿ ದಿನನಿತ್ಯ ನಾಲ್ಕಾರು ಕಿ.ಮೀ. ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದಾರೆ. ಇದು ಸಂಸ್ಥೆಯ ಗಮನಕ್ಕೆ ಬಂದಿದೆಯಾ? ಎಂದು ವೇದಿಕೆ ಪ್ರಶ್ನಿಸಿದೆ.
ಆಹಾರಗಳ ಬೆಲೆ, ವಿದ್ಯಾಭ್ಯಾಸದ ಖರ್ಚು, ಮನೆ ಬಾಡಿಗೆ ದರಗಳು ಏರುತ್ತಿವೆ, ಸಂಬಳ ಮಾತ್ರ ಅಷ್ಟಕ್ಕೇ ನಿಂತಿದೆ. ಇಂಥ ಸಮಯದಲ್ಲಿ ಬಸ್ ದರವನ್ನು ವಿಪರೀತವಾಗಿ ಏರಿಸಿದ್ದರಿಂದ ಬಡಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಸಿಬ್ಬಂದಿಗೆ ಡಿಎ ಹೆಚ್ಚಳ, ಡೀಸೆಲ್ ಬೆಲೆ ಏರಿಕೆಯಿಂದ ಬಿಎಂಟಿಸಿ ಆಗುತ್ತಿರುವ ನಷ್ಟವನ್ನು ಬಡವರು ಏಕೆ ಹೊರಬೇಕು? ಹೀಗಾದರೆ ಬದುಕುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಹಲವಾರು ಸಂಘಟನೆಗಳು ಒಗ್ಗೂಡಿ ಜೂ.28ರ ಬೆಳಿಗ್ಗೆ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಎದಿರು ಪ್ರತಿಭಟನೆ ಹಮ್ಮಿಕೊಂಡಿದ್ದವು. ಜು.2ರಂದು ಸಂಜೆ 5ಕ್ಕೆ ಮೆಜೆಸ್ಟಿಕ್ ಮೇಲುಸೇತುವೆ ಮೇಲೆ ಜನಜಾಗೃತಿ ಆಯೋಜಿಸಲಾಗಿದೆ. ಮತ್ತು ಜು.4ರಂದು ಕಪ್ಪು ದಿನಾಚರಣೆಯಾಗಿ ಆಚರಿಸಲು ವೇದಿಕೆ ನಿರ್ಧರಿಸಿದೆ.
ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಪ್ರಮುಖ ಬೇಡಿಕೆಗಳು ಹೀಗಿವೆ

ಬಸ್ ಪ್ರಯಾಣ ದರ ಹಿಂಪಡೆಯಬೇಕು
ಬಸ್ ಪ್ರಯಾಣ ದರವನ್ನು ಕೂಡಲೆ ಹಿಂಪಡೆಯಬೇಕು. ಮಾಸಿಕ ಮತ್ತು ದೈನಂದಿನ ಪಾಸ್ ಬೆಲೆಯನ್ನು ಇಳಿಸಬೇಕು. ಸಾರಿಗೆ ಸಂಸ್ಥೆ ಬರೀ ಲಾಭದ ಮೇಲೆ ಕಣ್ಣಿಡಬಾರದು, ಜನರಿಗೆ ಒದಗಿಸುವ ಅನುಕೂಲತೆಗಳ ಬಗ್ಗೆಯೂ ಗಮನವಿರಬೇಕು.

ಸಾಮಾನ್ಯ ಬಸ್ ಸಂಖ್ಯೆ ಹೆಚ್ಚಿಸಬೇಕು
ಸಾಮಾನ್ಯ ಶ್ರೇಣಿಯ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಹೊರವಲಯಗಳಿಗೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಬೇಕು. ಒಳಪ್ರದೇಶ ಮತ್ತು ಕೊಳಚೆ ಪ್ರದೇಶಗಳಿಗೆ ಮಿನಿ ಬಸ್ ಸಂಪರ್ಕ ಕಲ್ಪಿಸಬೇಕು.

ಬಸ್ ನಿಲ್ದಾಣಗಳಲ್ಲಿ ಅನುಕೂಲತೆ ಒದಗಿಸಬೇಕು
ಕಲಾಸಿಪಾಳ್ಯ ಸೇರಿದಂತೆ ಹಲವಾರು ಕಡೆಗಳಲ್ಲಿ ಜನರಿಗೆ ನಿಲ್ಲಲು ಶೆಲ್ಟರುಗಳಿಲ್ಲ. ಅನೇಕ ಕಡೆಗಳಲ್ಲಿ ಶೆಲ್ಟರ್ ಇದ್ದರೂ ಕುಳಿತುಕೊಳ್ಳಲು ಬೆಂಚ್ ಇರುವುದಿಲ್ಲ. ಹೀಗಾಗಿ, ಎಲ್ಲ ಬಸ್ ನಿಲ್ದಾಣಗಳಲ್ಲಿ ತಂಗುದಾಣ, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

ಮಹಿಳೆಯರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಬೇಕು
ಬಸ್ಸಲ್ಲಿ ಪ್ರಯಾಣಿಸುವ ಮಹಿಳೆಯರು, ಅಲ್ಪ ಸಂಖ್ಯಾತರು, ವಿಲಕಚೇತನರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಕಿರುಕುಳ, ದೌರ್ಜನ್ಯವನ್ನು ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

ಪಾರದರ್ಶಕ ವ್ಯವಸ್ಥೆ ಜಾರಿ ತರಬೇಕು
ಬೆಂಗಳೂರಿನ ಬಸ್ ವ್ಯವಸ್ಥೆಯನ್ನು ಜನಪರವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಮೇಲ್ವಿಚಾರಿಸಲು ನಾಗರಿಕ ಅರ್ಥಪೂರ್ಣ ಸಮಾಲೋಚನೆಯನ್ನು ಜುಲೈ 15, 2013ರೊಳಗೆ ಆಯೋಜಿಸಬೇಕು.












Click it and Unblock the Notifications