ಲೋಕಾಯುಕ್ತ ದಾಳಿಗೆ ಹೆದರಿ ಅಧಿಕಾರಿ ಪರಾರಿ!

ತುಮಕೂರು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಬಿ.ನಂಜುಂಡಯ್ಯ, ಚಾಮರಾಜನಗರದ ರೇಷ್ಮೆ ಇಲಾಖೆ ಡಿ ಗ್ರೂಪ್ ನೌಕರ ಕೆ.ವೆಂಕಟರಾಮ್ ಮತ್ತು ಬಾಗಲಕೋಟೆ ಜಿಲ್ಲೆಯ ಲೋಕೋಪಯೋಗಿ ಎಂಜಿನಿಯರ್ ಎಂ.ಆರ್.ವಡ್ಡರ್ ನಿವಾಸಗಳ ಮೇಲೆ ದಾಳಿ ನಡೆದಿದೆ.
ತುಮಕೂರು : ಶುಕ್ರವಾರ ಬೆಳಗ್ಗೆ ಜಿಲ್ಲಾ ಲೋಕಾಯುಕ್ತ ಎಸ್ಪಿ ರಮೇಶ್‌ಚಂದ್ರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕೆ.ಬಿ.ನಂಜುಂಡಯ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿತು. ನಂಜುಂಡಯ್ಯ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ದೂರಿನ ಅನ್ವಯ ದಾಳಿ ನಡೆಸಲಾಯಿತು.
ನಂಜುಂಡಯ್ಯ ದೊಡ್ಡ ನಾರಮಂಗಲದಲ್ಲಿ ೫ ಎಕರೆ ಭೂಮಿ, ತುಮಕೂರಿನ ಅಶೋಕ ನಗರದಲ್ಲಿ ಒಂದು ಮನೆ, ಹೆಗ್ಗೆರೆ ಗ್ರಾಮದಲ್ಲಿ ಒಂದು ಮನೆ, ಕಾರು, ಮೂರು ಬೈಕ್, ಲಕ್ಷಾಂತರ ರೂ. ನಗದು ಹೊಂದಿರುವುದು ದಾಳಿಯಿಂದ ಬೆಳಕಿಗೆ ಬಂದಿದೆ.
ತುಮಕೂರಿನ ಸರಸ್ವತಿಪುರಂನಲ್ಲಿ ನಂಜುಂಡಯ್ಯ ತಮ್ಮ ಹೆಸರಿನಲ್ಲಿ ಮನೆ ಮತ್ತು ನಿವೇಶನಗಳನ್ನು ಹೊಂದಿರುವ ದಾಖಲೆಗಳು ದಾಳಿಯ ವೇಳೆ ಪತ್ತೆಯಾಗಿದೆ. ದಾಖಲೆಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
ಅಧಿಕಾರಿ ಮನೆಯಿಂದ ಪರಾರಿ : ಬಾಗಲಕೋಟೆ ಜಿಲ್ಲೆಯ ಲೋಕೋಪಯೋಗಿ ಇಂಜಿನಿಯರ್ ಎಂ.ಆರ್.ವಡ್ಡರ್ ಅವರ ನಿವಾಸದ ಮೇಲೆ ದಾಳಿ ನಡೆಸಲು ಹೋದ ಅಧಿಕಾರಿಗಳಿಗೆ ನಿರಾಸೆ ಕಾದಿತ್ತು. ಬೆಳಗ್ಗೆ 5.30ಕ್ಕೆ ಅಧಿಕಾರಿಗಳು ಅವರ ನಿವಾಸಕ್ಕೆ ಹೋದಾಗ ಬೀಗ ಹಾಕಲಾಗಿತ್ತು.
ಅಕ್ಕ ಪಕ್ಕದ ಮನೆಯವರು ವಡ್ಡರ್ ಕುಟುಂಬದವರು ರಾತ್ರಿಯೇ ಬೆಂಗಳೂರಿಗೆ ಹೋಗಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ದಾಳಿ ನಡೆಸಲು ಹೋದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್ ಬಂದರು. ದಾಳಿಯ ಸುಳಿವು ಅರಿತು ವಡ್ಡರ್ ಪರಾರಿಯಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ವಡ್ಡರ್ ಅವರು ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದು, ಚಿಕ್ಕೋಡಿ ತಾಲೂಕಿನ ಅವರ ನಿವಾಸದ ಮೇಲೆ ದಾಳಿ ನಡೆಯಿತು. ಆದರೆ, ವಡ್ಡರ್ ಅವರು ಅಲ್ಲಿಯೂ ಇರಲಿಲ್ಲ. ಮನೆಗಳಲ್ಲಿ ಸಿಕ್ಕ ದಾಖಲೆಗಳನ್ನು ವಶಪಡಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಸರ್ಕಾರಿ ನೌಕರನ ಅಂಗಡಿ ಮೇಲೆ ರೇಡ್ : ಚಾಮರಾಜನಗರದ ರೇಷ್ಮೆ ಇಲಾಖೆ ಕಚೇರಿಯ ಡಿ ಗ್ರೂಪ್ ನೌಕರರಾಗಿರುವ ಕೆ.ವೆಂಕಟರಾಮ್ ಅವರ ಮನೆ ಮತ್ತು ಅಂಗಡಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.
ನಗರದ ಸಂತೆ ಮರಹಳ್ಳಿ ವೃತ್ತದ ಬಳಿ ವೆಂಕಟರಾಮ್ ಅವರ ಆದಿಶಕ್ತಿ ಸೌಂಡ್ಸ್ ಅಂಡ್ ಲೈಟಿಂಗ್ ಕಚೇರಿಯಲ್ಲಿ ಮೊದಲು ದಾಖಲೆಗಳ ಪರಿಶೀಲನೆ ನಡೆಸಿದ, ಅಧಿಕಾರಿಗಳು, ನಂತರ ಸಮೀಪದಲ್ಲಿರುವ ಅವರ ಮನೆಯ ಬಾಗಿಲು ತಟ್ಟಿದರು.
ಮನೆ, ನಿವೇಶನ, ಕೃಷಿ ಭೂಮಿ, ಬ್ಯಾಂಕ್ ಠೇವಣಿ ದಾಖಲೆಗಳು ಸೇರಿದಂತೆ ಹಲವಾರು ದಾಖಲೆಗಳನ್ನು ವೆಂಕಟರಾಮ್ ನಿವಾಸದಿಂದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇವರ ಆಸ್ತಿ ಮೌಲ್ಯವೆಷ್ಟು? ಎಂದು ಪರಿಶೀಲನೆ ನಡೆಸುತ್ತಿದ್ದಾರೆ.( ಭ್ರಷ್ಟರಿಗೆ ಬಿಸಿ ಮುಟ್ಟಿಸಲು ಲೋಕಾಯುಕ್ತರು ಸಜ್ಜು)












Click it and Unblock the Notifications