ದಕ್ಷ ಪೊಲೀಸ್ ಅಧಿಕಾರಿ ಐಜಿಪಿ ಪ್ರತಾಪ್ ರೆಡ್ಡಿ
ಮಂಗಳೂರು, ಜೂ. 27 : ತೀವ್ರ ವಿವಾದಕ್ಕೆ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಮಣಿಪಾಲ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಡೆಗೂ ಅತ್ಯಾಚಾರಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಇನ್ನೋರ್ವನನ್ನು ಹುಡುಕುತ್ತಿದ್ದಾರೆ.
ಕೇರಳ ಮೂಲದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದು ಆರು ದಿನಗಳಾದರೂ ಕಾಮುಕ ಕೃತ್ಯ ಎಸಗಿದವರ ಪತ್ತೆಯಾಗದಿದ್ದರಿಂದ ಪೊಲೀಸರು ಸಾರ್ವಜನಿಕ ವಲಯದಿಂದ ಭಾರೀ ಟೀಕೆಗೆ ಗುರಿಯಾಗಿದ್ದರು. ಯುವತಿಯನ್ನು ಭೇಟಿ ಮಾಡಲು ಪೊಲೀಸರಿಗೆ ಕೂಡ ಅವಕಾಶ ನೀಡದ್ದರಿಂದ ಈ ಪ್ರಕರಣ ಭಾರೀ ಕಗ್ಗಂಟಾಗಿತ್ತು. ಯುವತಿ ನೀಡಿದ ಮಾಹಿತಿಯ ಆಧಾರದ ಮೇಲೆ ಅತ್ಯಾಚಾರ ಎಸಗಿದವನ ರೇಖಾಚಿತ್ರ ಬಿಡಿಸಲಾಗಿತ್ತು ಮತ್ತು ಸುಳಿವು ನೀಡಿದವರಿಗೆ 5 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು.
ಇದನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಕಡೆಗೂ ಹರೀಶ್ (ಹರಿಪ್ರಸಾದ್) ಮತ್ತು ಯೋಗೀಶ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಆನಂದ್ ಎಂಬ ಇನ್ನೊಬ್ಬಾತ ಗೋವಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ [ಆತ್ಮಹತ್ಯೆಗೆ ಯತ್ನಿಸಿದ ಆನಂದ್]. ಪೊಲೀಸರ ಈ ಪರಾಕ್ರಮದ ಹಿಂದಿನ ರೂವಾರಿ ಮಂಗಳೂರು ಪಶ್ಚಿಮ ವಲಯದ ಐಜಿಪಿ ಆಗಿರುವ ಪ್ರತಾಪ್ ರೆಡ್ಡಿ. ಅತ್ಯಂತ ದಕ್ಷ, ಖಡಕ್ ಮತ್ತು ಸೈಬರ್ ಅಪರಾಧ ಬಗೆಹರಿಸುವಲ್ಲಿ ನಿಪುಣರೆನಿಸಿಕೊಂಡಿರುವ ಪ್ರತಾಪ್ ರೆಡ್ಡಿ ಅವರ ಪರಿಚಯ ಇಲ್ಲಿದೆ.

* ಪ್ರತಾಪ್ ರೆಡ್ಡಿ ಅವರು 1991ನೇ ಬ್ಯಾಚಿನ (ಕರ್ನಾಟಕ ಕೇಡರ್) ಐಪಿಎಸ್ ಅಧಿಕಾರಿಯಾಗಿದ್ದು, ಮಂಗಳೂರು ಪಶ್ಚಿಮ ವಲಯದ ಐಜಿಪಿ ಆಗಿದ್ದಾರೆ.
* ರೆಡ್ಡಿ ಅವರು ತಮ್ಮ ವೃತ್ತಿಯನ್ನು ಹಾಸನ ಜಿಲ್ಲೆಯ ಸಹಾಯಕ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಪ್ರಾರಂಭಿಸಿದರು.
* ಇದಕ್ಕೂ ಮೊದಲು ಅವರು 2009ರಿಂದ ಬೆಂಗಳೂರಿನಲ್ಲಿರುವ ನಾಸ್ಕಾಂ(National Association of Software and Services Companies)ನ ಸೈಬರ್ ಸೆಕ್ಯೂರಿಟಿ ವಿಂಗ್‌ಗೆ ಸಲಹೆಗಾರರಾಗಿದ್ದರು.
* ಇಂಡಿಯಾ ಸೈಬರ್ ಲ್ಯಾಬ್ಸ್ ಯೋಜನೆಗಳ ಮುಖಾಂತರ ಕಾನೂನು ಜಾರಿ ಮತ್ತು ಪ್ರಾಸಿಕ್ಯೂಷನ್ ನಿರ್ದೇಶನಾಲಯ ಸೇರಿದಂತೆ ಹಲವಾರು ಸರಕಾರಿ ಇಲಾಖೆಗಳಲ್ಲಿ ಸೈಬರ್ ಭದ್ರತೆ ಕುರಿತಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ.
* ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವುದರಲ್ಲಿ ಅಪಾರ ಅನುಭವ ಪಡೆದಿರುವ ನುರಿತ ಪೊಲೀಸ್ ಅಧಿಕಾರಿ ಎಂದು ಪ್ರತಾಪ್ ರೆಡ್ಡಿ ಅವರು ಹೆಸರುಗಳಿಸಿದ್ದಾರೆ.
* ಬಿಜಾಪುರ, ಗುಲಬರ್ಗಾ ಜಿಲ್ಲೆಗಳಲ್ಲಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸಿರುವ ಅವರು, ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್, ಬೆಂಗಳೂರಿನಲ್ಲಿ ಕಮಾಂಡಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
* ಬೆಂಗಳೂರನಲ್ಲಿ ಸಿಬಿಐನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಹಲವಾರು ಬ್ಯಾಂಕ್ ಮತ್ತು ಸೆಕ್ಯೂರಿಟಿ ಡೊಮೇನ್‌ಗಳಲ್ಲಿ ನಡೆದ ಬೃಹತ್ ಹಣಕಾಸು ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು. ಮುಂಬೈನಲ್ಲಿ ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗದ ಮುಖ್ಯಸ್ಥರೂ ಆಗಿದ್ದರು.
* ಕರ್ನಾಟಕದ ಸಿಓಡಿ ವಿಭಾಗದ ಡಿಐಜಿ ಆಗಿದ್ದಾಗ ವಿಶೇಷ ವಿಚಾರಣೆ, ಹತ್ಯೆ, ದರೋಡೆ, ಮಹಿಳೆ ವಿರುದ್ಧದ ಅಪರಾಧ, ಹಣಕಾಸು ಅವ್ಯವಹಾರ ಮುಂತಾದ ವಿಭಾಗಗಳಲ್ಲಿ ತಮ್ಮ ನೈಪುಣ್ಯತೆಯನ್ನು ತೋರಿ ದಕ್ಷ ಅಧಿಕಾರಿ ಅನಿಸಿಕೊಂಡಿದ್ದಾರೆ.
* ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯಂಥ ವಿವಿಐಪಿಗಳು ಭಾಗವಹಿಸಿದ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಹನ್ನೆರಡು ದಿನಗಳ ಕಾಲ, ಲಕ್ಷಾಂತರ ಭಕ್ತಾದಿಗಳು ಭಾಗಿಯಾಗಿದ್ದಾಗ ಯಾವುದೇ ಅವಘಡ ಸಂಭವಿಸದಂತೆ ಭದ್ರತೆಯನ್ನು ಒದಗಿಸಿದ್ದಕ್ಕಾಗಿ 1994ರಲ್ಲಿ ಕರ್ನಾಟಕ ಸರಕಾರದಿಂದ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದರು.












Click it and Unblock the Notifications