ಲೋಕಸಭೆ ಚುನಾವಣೆ ಕಹಳೆ ಊದಿದ ಡಾ.ಜಿ.ಪರಮೇಶ್ವರ್

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪರಮೇಶ್ವರ್, ಏಕ ವ್ಯಕ್ತಿಗೆ ಏಕ ಹುದ್ದೆ ನೀತಿ ಅನ್ವಯ ರಾಜ್ಯ ಕೆಪಿಸಿಸಿ ಪದಾಧಿಕಾರಿಗಳನ್ನು ಪುನಃ ರಚಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಕೆಪಿಸಿಸಿಯ ಕೆಲವು ಪದಾಧಿಕಾರಿಗಳು ಸದ್ಯ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್, ಖಜಾಂಚಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹೊಂದಿರುವ 14 ಮಂದಿ ಸಚಿವ ಸಂಪುಟದಲ್ಲಿದ್ದಾರೆ.
ಒಬ್ಬರಿಗೆ ಒಂದೇ ಹುದ್ದೆ ಎಂದು ಕೆಪಿಸಿಸಿ ಮೊದಲೇ ಸ್ಪಷ್ಟಪಡಿಸಿದೆ. ಆದರೆ, ಪಕ್ಷದ ತಮ್ಮ ಹುದ್ದೆಗಳಿಗೆ ಇನ್ನೂ ರಾಜೀನಾಮೆ ನೀಡಿಲ್ಲ. ಕೆಪಿಸಿಸಿ ಪುನಃ ರಚಿಸಿದರೆ, ಉಳಿದ ಕಾರ್ಯಕರ್ತರಿಗೆ ಅವಕಾಶ ದೊರೆಯಲಿದೆ ಎಂದು ಪರಮಶ್ವರ್ ಹೇಳಿದರು.
ಚುನಾವಣೆಗೆ ಸಿದ್ಧತೆ : ರಾಜ್ಯ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ತಯಾರಿಯನ್ನು ಆರಂಭಿಸಿದೆ ಎಂದ ಪರಮೇಶ್ವರ್, ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ತಲಾ ಮೂವರು ವೀಕ್ಷಕರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಎಐಸಿಸಿ ಸೂಚನೆ ಮೇರೆಗೆ ವೀಕ್ಷರನ್ನು ನೇಮಕ ಮಾಡಲಾಗಿದೆ. ಈ ವೀಕ್ಷಕರು ಶೀಘ್ರವೇ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರು, ನಾಯಕರು ಹಾಗೂ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಮೂವರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಲಿದ್ದಾರೆ ಎಂದು ಹೇಳಿದರು.
ಒಂದು ತಿಂಗಳ ಗಡುವು : ಪಕ್ಷ ನೇಮಿಸಿದ ವೀಕ್ಷರು ಒಂದು ತಿಂಗಳನಲ್ಲಿ ಕ್ಷೇತ್ರದ ಕುರಿತು ವರದಿ ಮತ್ತು ಸಂಭವನೀಯರ ಪಟ್ಟಿಯನ್ನು ಕೆಪಿಸಿಸಿಗೆ ನೀಡಲು ಕಾಲಾವಕಾಶ ನೀಡಲಾಗಿದೆ. ವರದಿಗಳನ್ನು ಪರಿಶೀಲಿಸಿ, ತಾವು ಮತ್ತೊಮ್ಮೆ ರಾಜ್ಯ ಪ್ರವಾಸ ಮಾಡುರುವುದಾಗಿ ಪರಮೇಶ್ವರ್ ಮಾಹಿತಿ ನೀಡಿದರು.
ಲೋಕಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಯುಪಿಎ ಸರ್ಕಾರದ ಸಾಧನೆಗಳ ವಿವರವುಳ್ಳ ಕಿರು ಹೊತ್ತಿಗೆಯನ್ನು ಜನರಿಗೆ ನೀಡುಲಾಗುವುದು. ಈ ಕುರಿತ ಕಾರ್ಯಗಳು ಪ್ರಾರಂಭವಾಗಿದ್ದು, ಕಿರುಹೊತ್ತಿಗೆ ಶೀಘ್ರದಲ್ಲೇ ಮುದ್ರಣಗೊಳ್ಳಲಿದೆ ಎಂದರು.
ಬೆಂಗಳೂರಿಗೆ ದಿಗ್ವಿಜಯ ಸಿಂಗ್ : ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಜೂ.1 ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಚಿವರೊಂದಿಗೆ ಜೂ.1 ಮತ್ತು 2ರಂದು ಸಭೆ ನಡೆಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.












Click it and Unblock the Notifications