ಬೆಳಗಾವಿ ಅಧಿವೇಶನಕ್ಕೆ ಮಾಡಿದ ಖರ್ಚು 7 ಕೋಟಿ!
ಬೆಳಗಾವಿ, ಜೂ.26 : ಬೆಂಗಳೂರು ಬಿಟ್ಟು ದೂರದ ಬೆಳಗಾವಿಯ ಸುವರ್ಣ ಸೌಧದಲ್ಲಿ ಮೊದಲ ಅಧಿವೇಶನ ನಡೆಸಿದ ಕೀರ್ತಿ ಹಿಂದಿನ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಆದರೆ, ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸಿ ಕೋಟ್ಯಾಂತರ ರೂ.ಗಳನ್ನು ಸರ್ಕಾರ ನೀರಿನಂತೆ ಖರ್ಚು ಮಾಡಿದೆ ಎಂಬುದು ಈಗ ಬಯಲಾಗಿದೆ.
ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಎನ್ನುವವರು, ಆರ್ ಟಿಐ ಮೂಲಕ ಪಡೆದ ಮಾಹಿತಿ ಡಿಸೆಂಬರ್ ನಲ್ಲಿ ನಡೆದ ಅಧಿವೇಶನಕ್ಕೆ ಸರ್ಕಾರ ಒಟ್ಟು ಮೊತ್ತ 7.39 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂಬ ಮಾಹಿತಿ ಹೊರಹಾಕಿದೆ.
ಉತ್ತರ ಕರ್ನಾಟಕ ಅಭಿವೃದ್ದಿಗೋಸ್ಕರ 390 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರ, ಸಮಸ್ಯೆಗಳು ಈಡೇರುತ್ತವೆ ಎಂದು ಜನರು ಕನಸು ಕಂಡಿದ್ದರು.
ಆದರೆ, ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ, ಡಾ. ನಂಜುಂಡಪ್ಪ ವರದಿ ಅನುಷ್ಠಾನ ಹಾಗೂ ನನೆಗುದಿಗೆ ಬಿದ್ದಿರುವ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಮುಂತಾದವುಗಳ ಕುರಿತು ಯಾವುದೇ ಚರ್ಚೆ ನಡೆಸಿಲ್ಲ. ಆದರೂ, ದಿನಕ್ಕೆ 1 ಕೋಟಿಯಂತೆ ಹಣ ಖರ್ಚು ಮಾಡಲಾಗಿದೆ.

ಯಾರಿಂದ ಎಷ್ಟು ಹಣ ಪಾವತಿ
ಏಳು ದಿನದ ಅಧಿವೇಶನಕ್ಕಾಗಿ ಜಿಲ್ಲಾಡಳಿತ ಸುಮಾರು 3.93 ಕೋಟಿ, ಲೋಕೋಪಯೋಗಿ ಇಲಾಖೆ 3.45 ಕೋಟಿ ಸೇರಿ ಒಟ್ಟು 7.39 ಕೋಟಿ ಜನರ ದುಡ್ಡನ್ನು ಖರ್ಚು ಮಾಡಲಾಗಿದೆ. ಆದರೆ, ಕಾವೇರಿ ವಿವಾದ ಬುಗಿಲೆದ್ದು, ಅಧಿವೇಶನದಿಂದ ಸಿಎಂ ಜಗದೀಶ್ ಶೆಟ್ಟರ್ ದೆಹಲಿಗೆ ತೆರಳಿದರು. ಆದ್ದರಿಂದ ಏನು ಚರ್ಚೆ ನಡೆಯಿತು ಎಂದು ಜನರಿಗೆ ತಿಳಿದಿದೆ.

ಪ್ರಯಾಣ ಭತ್ಯೆಗಾಗಿ 17 ಲಕ್ಷ
ಅಧಿವೇಶನಕ್ಕಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯರ ಪ್ರಯಾಣ ಹಾಗೂ ದಿನಭತ್ಯೆಗಾಗಿ 17.34 ಲಕ್ಷ ರೂ.ಖರ್ಚು ಮಾಡಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಆದರೆ, 224 ಶಾಸಕರ ಖರ್ಚು ಹಾಗೂ ಮುಖ್ಯಮಂತ್ರಿ ವಿಮಾನಯಾನದ ಖರ್ಚಿನ ವಿವರಗಳನ್ನು ಸರ್ಕಾರ ನೀಡಿಲ್ಲ.

ಊಟ ವಸತಿಗಾಗಿ ಲಕ್ಷ ಲಕ್ಷ ಖರ್ಚು
ಅಧಿಕಾರಿಗಳು ನೀಡಿರುವ ಮಾಹಿತಿಗಾಗಿ ಎರಡು ಸದನಗಳ ಶಾಸಕರ ಊಟ, ವಸತಿ, ಹಾಗೂ ಬೆಳಗಿನ ಉಪಹಾರ ಸೇರಿ ಒಟ್ಟು 90,61,833 ಮತ್ತು ಸಚಿವರ ಊಟ ವಸತಿಗಾಗಿ 31,24,490 ರೂ.ಗಳನ್ನು ಖರ್ಚು ಮಾಡಲಾಗಿದೆ. ಮಾಧ್ಯಮ ಪ್ರತಿನಿಧಿಗಳ ವಸತಿಗಾಗಿ 23,00,853 ರೂ. ಖರ್ಚು ಮಾಡಿದ್ದಾರಂತೆ.

523 ರೂ. ಊಟದ ಖರ್ಚು
ಸುವರ್ಣಸೌಧದ ಅಧಿವೇಶನದ ಸಮಯದಲ್ಲಿ ಪ್ರತಿದಿನ 2 ಸಾವಿರ ಜನರು ಊಟ ಮಾಡಿದ್ದಾರೆ. ಒಟ್ಟು 23,460 ಜನರ ಜನರು ಊಟ ಮಾಡಿದ್ದಾರೆ ಎಂದು ಮಾಹಿತಿ ಲೆಕ್ಕನೀಡುತ್ತದೆ. ಪ್ರತಿ ಊಟಕ್ಕೆ 523 ವೆಚ್ಚ ಮಾಡಲಾಗಿದೆ ಎಂಬುದು ಆಶ್ಚರ್ಯ ಮೂಡಿಸಿದೆ.

ಇಂಧನ ಹೊರೆ
ಶಾಸಕರು ಸಚಿವರು ಒಂದು ಕಡೆಯಾದರೆ, ಬೆಂಗಳೂರಿನಿಂದ ಆಗಮಿಸಿದ್ದ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳ ವಾಹನಗಳ ಬಾಡಿಗೆ ಹಾಗೂ ಇಂಧನ ವೆಚ್ಚಕ್ಕಾಗಿ 73,57,038 ರೂ. ಖರ್ಚು ಮಾಡಲಾಗಿದೆಯಂತೆ, ಎರಡು ಸದನಗಳ ಅಧಿಕಾರಿಗಳ ಊಟ, ವಸತಿಗಳಿಗಾಗಿ 22,17,417 ರೂ. ಖರ್ಚು ಮಾಡಿದ್ದಾರೆ.

ಜನರಿಗೆ ಸಿಕ್ಕಿದ್ದೇನು?
ಭವ್ಯ ಸುವರ್ಣಸೌಧ ಬಿಟ್ಟರೆ, ಜನರಿಗೆ ಅಧಿವೇಶನದಿಂದ ಆದ ಲಾಭ ಮಾತ್ರ ಸೊನ್ನೆ. ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಿದೆವು ಎಂಬ ಹೆಗ್ಗಳಿಗೆ ಬಿಜೆಗೆ ಒಲಿದಿದೆ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳು ಬಗೆಹರಿದಿಲ್ಲ. ಈಗ ಸುವರ್ಣ ಸೌಧವನ್ನು ಸರಿಯಾಗಿ ನೋಡಿಕೊಳ್ಳಲು ಲಕ್ಷಾಂರತ ರೂ. ವೆಚ್ಚ ಮಾಡಲಾಗುತ್ತಿದೆ.












Click it and Unblock the Notifications